ತಮಿಳುನಾಡಿನಲ್ಲಿ ಬಿಹಾರ ವಲಸಿಗರ ಮೇಲೆ ಹಲ್ಲೆ ಎಂದು ನಕಲಿ ವಿಡಿಯೊ ಹಂಚಿದ್ದ ವ್ಯಕ್ತಿಯನ್ನು ಬಂಧಿಸಿದ ಬಿಹಾರ ಪೊಲೀಸರು

Update: 2023-03-06 15:54 GMT

ಪಾಟ್ನಾ: ಬಿಹಾರದ (Bihar) ವಲಸೆ ಕಾರ್ಮಿಕರ (Migrant workers) ಮೇಲೆ ತಮಿಳುನಾಡಿನಲ್ಲಿ (Tamil Nadu) ಹಲ್ಲೆ ನಡೆಸಲಾಗಿದೆ ಎಂಬ ವದಂತಿಯ ನಡುವೆಯೇ ಈ ಸಂಬಂಧ ಓರ್ವನನ್ನು ಬಂಧಿಸಿರುವ ಬಿಹಾರ ಪೊಲೀಸರು, ದಾರಿ ತಪ್ಪಿಸುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿದ ಕಾರಣಕ್ಕೆ ಹಲವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ndtv.com ವರದಿ ಮಾಡಿದೆ.

ಈ ಕುರಿತು ಪೊಲೀಸ್ ಮುಖ್ಯ ಕಚೇರಿಯಲ್ಲಿ ಮಾಹಿತಿ ನೀಡಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜಿತೇಂದ್ರ ಸಿಂಗ್ ಗಂಗಾವರ್, ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ ಎಂದು ನಕಲಿ ವಿಡಿಯೊ ಹಂಚಿಕೆ ಮಾಡಿದ್ದ ಓರ್ವ ವ್ಯಕ್ತಿಯನ್ನು ಜಮುಯಿ ಜಿಲ್ಲೆಯಿಂದ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

"ಯಾರು ವದಂತಿಗಳಿಗಾಗಿ ಪೋಸ್ಟ್ ಮಾಡಿದ್ದಾರೆ ಮತ್ತು ಹಂಚಿದ್ದಾರೆ ಅಂಥವರನ್ನು ಬಂಧಿಸಲಾಗುವುದು. ಪೊಲೀಸರು ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. 10 ಸದಸ್ಯರ ತಂಡವು ಈ ಕುರಿತು ತನಿಖೆ ನಡೆಸುತ್ತಿದೆ" ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆಯಾಗಿದ್ದ ವಲಸೆ ಕಾರ್ಮಿಕರ ಮೇಲೆ ತಮಿಳುನಾಡಿನಲ್ಲಿ ಹಲ್ಲೆ ನಡೆಸಲಾಗಿದೆ ಎಂಬ ಹಲವು ತಿರುಚಿದ ವಿಡಿಯೊಗಳು ತಮಿಳುನಾಡಿನಾದ್ಯಂತ ದುಡಿಯುತ್ತಿರುವ ವಲಸಿಗ ಕಾರ್ಮಿಕರಲ್ಲಿ ಭೀತಿ ಸೃಷ್ಟಿಸಿದ್ದವು. ಈ ತಿರುಚಿದ ಹಲ್ಲೆಯ ವಿಡಿಯೊಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ತೀವ್ರ ಕಳವಳ ವ್ಯಕ್ತಪಡಿಸಿದ್ದರು.

ಆದರೆ, ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದ ತಮಿಳುನಾಡು ಪೊಲೀಸ್ ಮಹಾ ನಿರ್ದೇಶಕ ಶೈಲೇಂದ್ರ ಬಾಬು, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆಯಾಗುತ್ತಿರುವ ವಿಡಿಯೊ ಸುಳ್ಳು ಮತ್ತು ಕಿಡಿಗೇಡಿತನದ್ದಾಗಿದೆ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: ರಕ್ತದಲ್ಲಿ ಪತ್ರ ಬರೆದು ಬೆಳೆ ಹಾನಿ ಪರಿಶೀಲಿಸಲು ಬರುವಂತೆ ಮಹಾರಾಷ್ಟ್ರ ಸಿಎಂಗೆ ಆಮಂತ್ರಣ

Similar News