ಆಪ್ ನಾಯಕ ಸಿಸೋಡಿಯಾಗೆ ಮಾ. 20ರವರೆಗೆ ನ್ಯಾಯಾಂಗ ಬಂಧನ: ಧ್ಯಾನದ ಕೋಣೆ, ಭಗವದ್ಗೀತೆ ನೀಡಲು ನ್ಯಾಯಾಲಯ ಸೂಚನೆ
ಹೊಸದಿಲ್ಲಿ, ಮಾ. 6: ದಿಲ್ಲಿ ರಾಜ್ಯದ ನೂತನ ಅಬಕಾರಿ ನೀತಿಯಲ್ಲಿ ನಡೆದಿದೆಯೆನ್ನಲಾದ ಅವ್ಯವಹಾರಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ, ರಾಜ್ಯದ ಮಾಜಿ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ದಿಲ್ಲಿಯ ನ್ಯಾಯಾಲಯವೊಂದು ಸೋಮವಾರ ಮಾರ್ಚ್ 20ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಸಿಬಿಐಯು ಫೆಬ್ರವರಿ 26ರಂದು ಸಿಸೋಡಿಯರನ್ನು ಬಂಧಿಸಿತ್ತು. ಒಂದು ದಿನದ ಬಳಿಕ, ದಿಲ್ಲಿಯ ನ್ಯಾಯಾಲಯವೊಂದು ಅವರನ್ನು ಮಾರ್ಚ್ 4ರವರೆಗೆ ಸಿಬಿಐ ಕಸ್ಟಡಿಗೆ ನೀಡಿತ್ತು. ನ್ಯಾಯಾಲಯವು ಮಾರ್ಚ್ 4ರಂದು ಅವರ ಸಿಬಿಐ ಕಸ್ಟಡಿ ಅವಧಿಯನ್ನು ಇನ್ನೂ ಎರಡು ದಿನಗಳ ಕಾಲ ವಿಸ್ತರಿಸಿತ್ತು. ಅಂದು ಅವರ ಜಾಮೀನು ಅರ್ಜಿಯ ವಿಚಾರಣೆಯನ್ನೂ ನ್ಯಾಯಾಲಯವು ಮಾರ್ಚ್ 10ಕ್ಕೆ ಮುಂದೂಡಿತ್ತು.
ಸದ್ಯಕ್ಕೆ ಸಿಸೋಡಿಯಾರ ಪೊಲೀಸ್ ಕಸ್ಟಡಿಯನ್ನು ಕೇಳುವುದಿಲ್ಲ ಹಾಗೂ ಬಳಿಕ ಕೇಳಬಹುದು ಎಂದು ಸೋಮವಾರ ಸಿಬಿಐಯು ನ್ಯಾಯಾಲಯಕ್ಕೆ ಹೇಳಿತು. ಆದರೂ, ಸಿಸೋಡಿಯರ ಬೆಂಬಲಿಗರು ಮತ್ತು ಮಾಧ್ಯಮಗಳು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿವೆ ಎಂದು ಸಿಬಿಐ ವಕೀಲರು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಸೋಡಿಯರ ವಕೀಲ ಮೋಹಿತ್ ಮಾಥುರ್, ಈ ವಾದವನ್ನು ಕೇಳಿ ತನಗೆ ಆಘಾತವಾಗಿದೆ ಎಂದು ಹೇಳಿದರು. ‘‘ಅವರು ಮಾಧ್ಯಮಗಳಿಗೆ ಹೆದರುತ್ತಿದ್ದಾರೆಯೇ?’’ ಎಂದು ಪ್ರಶ್ನಿಸಿದರು.
ಪ್ರಕರಣದ ಬಗ್ಗೆ ವರದಿ ಮಾಡುವುದರಿಂದ ಮಾಧ್ಯಮವನ್ನು ತಡೆಯಲು ಸಾಧ್ಯವಿಲ್ಲ ಹಾಗೂ ಪ್ರತಿಭಟನೆಗಳು ಶಾಂತಿಯುತವಾಗಿರುವವರೆಗೆ ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ವಿಶೇಷ ನ್ಯಾಯಾಧೀಶ ಎಮ್.ಕೆ. ನಾಗ್ಪಾಲ್ ಹೇಳಿದರು.
ಸಿಸೋಡಿಯಾರ ಬಂಧನವನ್ನು ಪ್ರತಿಭಟಿಸಿ ಪ್ರತಿಪಕ್ಷಗಳ ಒಂಭತ್ತು ನಾಯಕರು ರವಿವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಪ್ರತಿಪಕ್ಷಗಳ ನಾಯಕರನ್ನು ಮಣಿಸಲು ಅವರ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಛೂ ಬಿಡಲಾಗುತ್ತಿದೆ ಎಂಬುದಾಗಿ ಅವರು ಆರೋಪಿಸಿದ್ದಾರೆ.
ಧ್ಯಾನದ ಕೋಣೆ, ಭಗವದ್ಗೀತೆ ನೀಡಲು ನ್ಯಾಯಾಲಯ ಸೂಚನೆ
ಸಿಸೋಡಿಯಾರನ್ನು ಜೈಲಿನ ಧ್ಯಾನದ ಕೋಣೆಯಲ್ಲಿರಿಸಬೇಕೆಂದು ಅವರ ವಕೀಲರು ನ್ಯಾಯಾಲಯದಲ್ಲಿ ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಈ ಮನವಿಯನ್ನು ಪರಿಗಣಿಸುವಂತೆ ಜೈಲಿನ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜೊತೆಗೆ, ಭಗವದ್ಗೀತೆಯನ್ನು ಜೈಲಿನ ಕೋಣೆಗೆ ಒಯ್ಯಲು ಕೂಡ ನ್ಯಾಯಾಲಯವು ಆಪ್ ನಾಯಕನಿಗೆ ಅನುಮತಿ ನೀಡಿತು.