×
Ad

ಹುಕ್ಕಾ ಬಾರ್‌ನಲ್ಲಿ 'ಇನ್‌ಸ್ಟಾಗ್ರಾಂ' ಸ್ನೇಹಿತನಿಂದ ಬಾಲಕಿಯ ಅತ್ಯಾಚಾರ

Update: 2023-03-06 22:25 IST

ಕಾನ್ಪುರ,ಮಾ.6: ಹುಕ್ಕಾ ಬಾರ್‌ವೊಂದರಲ್ಲಿ 16ರ ಹರೆಯದ ಬಾಲಕಿಯ ತಂಪು ಪಾನೀಯದಲ್ಲಿ ಮತ್ತು ಬರಿಸುವ ಔಷಧಿಯನ್ನು ಸೇರಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಉತ್ತರ ಪ್ರದೇಶದ ಕಾನ್ಪುರದ ನಿವಾಸಿಯನ್ನು ಪೊಲೀಸರು ಬಂಧಿಸಿದ್ದಾರೆ. ವೈದ್ಯ ದಂಪತಿಯ ಪುತ್ರಿಯಾಗಿರುವ ಬಾಲಕಿ ಇನ್‌ಸ್ಟಾಗ್ರಾಮ್‌ನಲ್ಲಿ ಆರೋಪಿಯ ಸಂಪರ್ಕಕ್ಕೆ ಬಂದಿದ್ದಳು. ವಿನಯ ಠಾಕೂರ್ ಮತ್ತು ಇತರ ಏಳು ಆರೋಪಿಗಳ ವಿರುದ್ಧ ಬಾಲಕಿಯ ತಂದೆ ಪೊಲೀಸ್ ದೂರನ್ನು ಸಲ್ಲಿಸಿದ್ದಾರೆ.

ಮಾ.4ರಂದು ಠಾಕೂರ್ ಬಾಲಕಿಯನ್ನು ನಗರದ ಕರಾಹಿಯಲ್ಲಿನ ಹುಕ್ಕಾ ಬಾರ್‌ಗೆ ಕರೆಸಿಕೊಂಡಿದ್ದು,ಅಲ್ಲಿ ಅವರು ಹುಕ್ಕಾ ಸೇವಿಸಿದ್ದರು. ಬಾಲಕಿಯ ತಂಪು ಪಾನೀಯದಲ್ಲಿ ನಿದ್ರಾಜನಕ ಪದಾರ್ಥವನ್ನು ಸೇರಿಸಿದ್ದ ಠಾಕೂರ್ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಬಳಿಕ ಆತ ಆಕೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದಿದ್ದು,ಅಲ್ಲಿ ಆತನ ಏಳು ಸ್ನೇಹಿತರು ಸೇರಿಕೊಂಡಿದ್ದರು. ಎಲ್ಲರೂ ಸೇರಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

ತನ್ನ ಮೇಲಿನ ಹಲ್ಲೆಯನ್ನು ಬಾಲಕಿ ಪ್ರತಿಭಟಿಸಿದಾಗ ಆರೋಪಿಗಳು ಆಕೆಯ ಮೈಗೆಲ್ಲ ಕಚ್ಚಿದ್ದರು. ಅವರಿಂದ ಹೇಗೋ ತಪ್ಪಿಸಿಕೊಂಡು ಮನೆ ಸೇರಿದ ಬಾಲಕಿ ತನ್ನ ಬವಣೆಯನ್ನು ಹೇಳಿಕೊಂಡಿದ್ದಳು. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಸ್ಥಳೀಯ ಮಾಧ್ಯಮಗಳ ವರದಿಗಳಂತೆ ಬಾಲಕಿ ಪ್ರತಿರೋಧಿಸಿದಾಗ ಅರೋಪಿಗಳು ಆಕೆಯನ್ನು ಥಳಿಸಿದ್ದು,ಆಕೆಯ ಕೆನ್ನೆ ಮತ್ತು ಹಣೆಯಲ್ಲಿ ತರಚಿದ ಗಾಯಗಳಾಗಿವೆ. ಆರೋಪಿ ಠಾಕೂರ್ ತನ್ನ ಅಶ್ಲೀಲ ವೀಡಿಯೊ ಮಾಡಿದ್ದ ಮತ್ತು ಕಳೆದ ಕೆಲವು ದಿನಗಳಿಂದ ತನ್ನನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದ ಮತ್ತು ವೀಡಿಯೊವನ್ನು ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದ ಎಂದೂ ಬಾಲಕಿ ತನ್ನ ತಂದೆಗೆ ತಿಳಿಸಿದ್ದಾಳೆ ಎನ್ನಲಾಗಿದೆ.

ಠಾಕೂರ್ ಇದಕ್ಕೂ ಮುನ್ನ ಬಾಲಕಿ ಬೇರೆ ಯಾರನ್ನೂ ಮದುವೆಯಾಗದಂತೆ ಆಕೆಯ ಎದೆಯ ಮೇಲೆ ಬ್ಲೇಡಿನಿಂದ ತನ್ನ ಹೆಸರನ್ನು ಕೆತ್ತಿದ್ದ. ಲೈಟರ್ ತೋರಿಸಿ ಆಕೆಯನ್ನು ಬೆದರಿಸಿದ್ದ ಮತ್ತು ತಲೆಗೂದಲನ್ನು ಸುಟ್ಟಿದ್ದ ಎಂದೂ ಪಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬಾಲಕಿ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಾಗಿ ರಾಜಸ್ಥಾನದ ಕೋಟಾದಲ್ಲಿ ತಯಾರಿ ನಡೆಸುತ್ತಿದ್ದಳು ಮತ್ತು ಠಾಕೂರ್ ಅಲ್ಲಿಗೂ ಆಕೆಯನ್ನು ಹಿಂಬಾಲಿಸಿದ್ದ ಮತ್ತು ಹೋಟೆಲ್ ಕೋಣೆಯಲ್ಲಿ ಆಕೆಯನ್ನು ಥಳಿಸಿದ್ದ. ಆಕೆಯ ಖರ್ಚಿಗಾಗಿ ತಾವು ಕಳುಹಿಸುತ್ತಿದ್ದ ಹಣವನ್ನು ಆತ ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದ ಎಂದೂ ಪಾಲಕರು ಆರೋಪಿಸಿದ್ದಾರೆ.

Similar News