ಮುಂಬೈ ಭವಿಷ್ಯ ಅದಾನಿಗಳ ಕೈಯಲ್ಲಿ

Update: 2023-03-06 19:30 GMT

ಅದಾನಿ ಗ್ರೂಪ್‌ನಿಂದ ಪಾವತಿ ಡಿಫಾಲ್ಟ್ ಸಂದರ್ಭದಲ್ಲಿ ತಾವು ಗಾಢಾಂಧಕಾರ ಮತ್ತು ಭಯಂಕರ ಅನಿಶ್ಚಿತತೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದು ಗೊತ್ತಾದರೆ ಮುಂಬೈನ ವಿದ್ಯುತ್ ಬಳಕೆದಾರರು ತೀವ್ರ ಆಕ್ರೋಶಗೊಳ್ಳುವುದು ಖಚಿತವಾಗಿದೆ.


ಕೇವಲ 100 ಕೋಟಿ ಡಾಲರ್ (ಸುಮಾರು 8,193 ಕೋ.ರೂ.)ಗಳಿಗಾಗಿ ಅದಾನಿ ಗ್ರೂಪ್ ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮಹಾನಗರದ ಭವಿಷ್ಯವನ್ನು ಗಾಢಾಂಧಕಾರದಲ್ಲಿ ಮುಳುಗುವ ಅಪಾಯದಲ್ಲಿರಿಸಿದೆ.

ಅದಾನಿ ಗ್ರೂಪ್ ಸಂಕಷ್ಟದಲ್ಲಿರುವ ಉದ್ಯಮಿ ಅನಿಲ್ ಅಂಬಾನಿಯವರ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಮೇಲೆ ನಿಯಂತ್ರಣವನ್ನು ಸಾಧಿಸಿದ ಕೇವಲ 18 ತಿಂಗಳುಗಳ ಬಳಿಕ 2020, ಫೆಬ್ರವರಿಯಲ್ಲಿ ಅದಾನಿ ಇಲೆಕ್ಟ್ರಿಸಿಟಿ ಮುಂಬೈ ಲಿ.(ಎಇಎಂಎಲ್) ಬಿಡುಗಡೆಗೊಳಿಸಿದ್ದ 100 ಕೋ.ಡಾಲರ್‌ಗಳ ಸೀನಿಯರ್ ಸೆಕ್ಯೂರ್ಡ್ ನೋಟ್ಸ್ (ಎಸ್‌ಎಸ್‌ಎನ್) ಅಂದರೆ ವಿತರಕ ದಿವಾಳಿತನವನ್ನು ಘೋಷಿಸಿದ ಸಂದರ್ಭದಲ್ಲಿ ಇತರ ಸಾಲಗಳಿಗಿಂತ ಮೊದಲು ಮರುಪಾವತಿಸಬೇಕಾದ ಬಾಂಡ್‌ಗಳಿಗೆ ಲಗತ್ತಿಸಲಾಗಿರುವ ಕಠಿಣ ಮೇಲಾಧಾರ ನಿಬಂಧನೆಗಳಿಂದ ಈ ಅಪಾಯ ಉದ್ಭವಿಸುತ್ತದೆ.

ವಿದ್ಯುತ್ ಆರ್ಥಿಕತೆಯ ಚಾಲಕ ಶಕ್ತಿಯಾಗಿದೆ:
ಮುಂಬೈ ಮಹಾನಗರದ ಶೇ.66ರಷ್ಟು ಬಳಕೆದಾರರಿಗೆ ವಿದುತ್ತನ್ನು ಪೂರೈಸುವುದಾಗಿ ಹೇಳಿಕೊಂಡಿರುವ ಎಇಎಂಎಲ್ ಪಾವತಿ ಡಿಫಾಲ್ಟ್ ಸಂದರ್ಭದಲ್ಲಿ ದೇಶದ ವಾಣಿಜ್ಯ ರಾಜಧಾನಿಯ ಜೀವಾಳವನ್ನು ತೀವ್ರ ತೊಂದರೆಗೊಳಗಾಗುವ ಅಪಾಯಕ್ಕೆ ಸಿಲುಕಿಸಿದೆ. ಅದಾನಿ ಗ್ರೂಪ್‌ನ ವಿರುದ್ಧ ಹಿಂಡನ್‌ಬರ್ಗ್ ವರದಿಯ ಬಳಿಕ ಡಿಫಾಲ್ಟ್‌ನ ಅಪಾಯಗಳು ಗಣನೀಯವಾಗಿ ಹೆಚ್ಚಿವೆ. ಎಇಎಂಎಲ್ ಹೊರಡಿಸಿರುವ ಈ ಎಸ್‌ಎಸ್‌ಎನ್‌ಗಳು ಶೇ.3.349ರ ಕೂಪನ್‌ಗಳನ್ನು ಹೊಂದಿದ್ದು, ಸಿಂಗಾಪುರ ಶೇರು ವಿನಿಮಯ ಕೇಂದ್ರದಲ್ಲಿ ಲಿಸ್ಟ್ ಆಗಿವೆ.

ಎಇಎಂಎಲ್ ಇಲ್ಲಿ ಲಿಸ್ಟೆಡ್ ಅಲ್ಲದ ಕಂಪೆನಿಯಾಗಿರುವುದರಿಂದ ಸಾಲ ಒಡಂಬಡಿಕೆಯ ನಿಯಮಗಳು ಹೆಚ್ಚಾಗಿ ತಿಳಿದಿಲ್ಲ, ಅಂದರೆ ಮುಂಬೈ ಮಹಾನಗರ, ಅದರ ಹಣಕಾಸು ನಿಯಂತ್ರಕರು, ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು ಮತ್ತು ಮಾರುಕಟ್ಟೆ ಅಧಿಕಾರಿಗಳಿಗೆ ತಾವಿರುವ ಅಪಾಯಕಾರಿ ಸ್ಥಿತಿಯ ಬಗ್ಗೆ ಬಹುಶಃ ಗೊತ್ತಿಲ್ಲ.
ಮುಂಬೈಗೆ ಕಾದಿರುವ ಅನಿಶ್ಚಿತತೆಗಳು ಮತ್ತು ಅಪಾಯಗಳು 100 ಕೋಟಿ ಡಾ.ಗಳ ಎಸ್‌ಎಸ್‌ಎನ್‌ಗಳಿಗೆ ಸಂಬಂಧಿಸಿದ ಕಠಿಣ ಷರತ್ತುಗಳಲ್ಲಿ ಅಡಗಿವೆ. ಇವುಗಳನ್ನು ಅಮೆರಿಕ, ಭಾರತ ಅಥವಾ ಐರೋಪ್ಯ ಆರ್ಥಿಕ ಪ್ರದೇಶದಲ್ಲಿ ಮಾರಾಟಕ್ಕೆ ನೀಡಲಾಗಿರಲಿಲ್ಲ. ಅವುಗಳನ್ನು ಮುಖ್ಯವಾಗಿ ಏಶ್ಯದ ಹೂಡಿಕೆದಾರರಿಗೆ ಮಾರಾಟ ಮಾಡಲಾಗಿದೆ. ಮುಂಬೈನಲ್ಲಿಯ ಪ್ರತೀ ಮೂರು ಮನೆಗಳಲ್ಲಿ ಎರಡು ಎಇಎಂಲ್‌ನಿಂದ ವಿದ್ಯುತ್ತನ್ನು ಪಡೆಯುತ್ತಿವೆ.
ಮುಂಬೈ ಮತ್ತು ಠಾಣೆಗಳ ಪ್ರಮುಖ ಉಪನಗರಗಳು ಸೇರಿದಂತೆ 400 ಚ.ಕಿ.ಮೀ.ಗೂ ಹೆಚ್ಚಿನ ಪ್ರದೇಶದಲ್ಲಿ 30 ಲಕ್ಷಕ್ಕೂ ಅಧಿಕ ಮನೆಗಳಿಗೆ ವಿದ್ಯುತ್ ಪೂರೈಕೆಗೆ ಎಇಎಂಎಲ್ ಪರವಾನಿಗೆಯನ್ನು ಹೊಂದಿದೆ.

ಅಡಮಾನಗಳು ಮತ್ತು ಹೊಣೆಗಾರಿಕೆಗಳು
ಬಾಂಡ್‌ನ ಮೇಲಾಧಾರ ನಿಯಮಗಳಡಿ ಎಇಎಂಎಲ್ 400 ಕೋಟಿ ಶೇರುಗಳು ಮತ್ತು ಪ್ರಿಫರನ್ಸ್ ಶೇರುಗಳ ಸಂಪೂರ್ಣ ಈಕ್ವಿಟಿ ಬಂಡವಾಳವನ್ನು ದೇಶದ ಅತ್ಯಂತ ದೊಡ್ಡ ಖಾಸಗಿ ವಿದ್ಯುತ್ ವಿತರಣೆ ಕಂಪೆನಿಯಲ್ಲಿ ಅಡವಿರಿಸಿದೆ. ಇದಕ್ಕಾಗಿ ಅದು ತಾನು ಈ ಸಾಲದ ಮರುಪಾವತಿಗೆ ತಪ್ಪಿದರೆ ಮುಂಬೈ ಮಹಾನಗರದ ಮೇಲೆ ಗಂಭೀರ ಪರಿಣಾಮಗಳನ್ನುಂಟು ಮಾಡಬಲ್ಲ ಕಠಿಣ ಷರತ್ತುಗಳನ್ನು ಒಪ್ಪಿಕೊಂಡಿದೆ.

2030ರಲ್ಲಿ ಪಕ್ವಗೊಳ್ಳುವ ಎಸ್‌ಎಸ್‌ಎನ್ ಅಥವಾ ಬಾಂಡ್‌ಗಳನ್ನು ಹೊಂದಿರುವವರು ಎಇಎಂಎಲ್‌ನ ಸ್ಥಿರಾಸ್ತಿಗಳು, ಕೆಲವು ಚರಾಸ್ತಿಗಳು, ಎಲ್ಲ ಲೆಕ್ಕಪುಸ್ತಕ ಸಾಲಗಳು, ಕಾರ್ಯಾಚರಣೆಯ ನಗದು ಹರಿವುಗಳು, ಸ್ವೀಕೃತಿಗಳು ಹಾಗೂ ಹಾಲಿ ಮತ್ತು ಭವಿಷ್ಯದ ಯೋಜನೆಗಳಿಂದ ಲಭಿಸುವ ಕಮಿಷನ್ ಅಥವಾ ಆದಾಯಗಳ ಮೇಲೆ ಮೊದಲ ಹಕ್ಕು ಹೊಂದಿರುತ್ತಾರೆ. ಇಷ್ಟೇ ಅಲ್ಲ, ಎಸ್‌ಎಸ್‌ಎನ್‌ಗಳಲ್ಲಿ ಹೂಡಿಕೆದಾರರು ಮಹಾರಾಷ್ಟ್ರ ವಿದ್ಯುತ್ ನಿಯಂತ್ರಣ ಆಯೋಗ (ಎಂಇಆರ್‌ಸಿ)ವು ಎಇಎಂಎಲ್‌ಗೆ ನೀಡಿರುವ ಪ್ರಸರಣ ಮತ್ತು ವಿತರಣೆ ಪರವಾನಿಗೆಗಳ ಮೇಲೂ ಹಕ್ಕನ್ನು ಹೊಂದಿರುತ್ತಾರೆ.

ಸಿಇಎಸ್‌ಸಿ ಮತ್ತು ಟಾಟಾ ಪವರ್‌ನಂತಹ ಕೆಲವು ಕಂಪೆನಿಗಳು ದಶಕಗಳಿಂದಲೂ ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯಲ್ಲಿ ತೊಡಗಿಕೊಂಡಿದ್ದರೂ 1991ರಲ್ಲಷ್ಟೇ ವಿದ್ಯುತ್ ಪ್ರಸರಣ ಉದ್ಯಮವನ್ನು ಪ್ರವೇಶಿಸಲು ಖಾಸಗಿ ಕ್ಷೇತ್ರಕ್ಕೆ ಅನುಮತಿ ನೀಡಲಾಗಿತ್ತು.
ಯಾವುದೇ ಪರವಾನಿಗೆದಾರನು ಸೂಕ್ತ ಆಯೋಗದ ಪೂರ್ವಾನುಮತಿಯಿಲ್ಲದೆ ಯಾವುದೇ ಸಂದರ್ಭದಲ್ಲಿಯೂ ತನ್ನ ಪರವಾನಿಗೆ ಅಥವಾ ಉತ್ಪಾದನಾ ಘಟಕ ಅಥವಾ ಅದರ ಯಾವುದೇ ಭಾಗವನ್ನು ಮಾರಾಟ, ಲೀಸ್, ವಿನಿಮಯದ ಮೂಲಕ ವರ್ಗಾಯಿಸುವಂತಿಲ್ಲ ಎಂದು ವಿದ್ಯುಚ್ಛಕ್ತಿ ಕಾಯ್ದೆ, 2003ರ ಕಲಂ 17(3) ಹೇಳುತ್ತದೆ.

2021 ಜೂನ್‌ನಲ್ಲಿ ಎಂಇಆರ್‌ಸಿ ಸೆಕ್ಯೂರಿಟಿ ಟ್ರಸ್ಟಿಯಾಗಿ ನಿಯೋಜಿತ ಮತ್ತು ಬಾಂಡ್ ಬಿಡುಗಡೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಹೊಂದಿರುವ ಎಸ್‌ಬಿಐಕ್ಯಾಪ್ ಟ್ರಸ್ಟಿ ಕಂ.ಲಿ.ಗೆ ಪ್ರಸರಣ ಮತ್ತು ವಿತರಣೆ ಪರವಾನಿಗೆಗಳ ಹಂಚಿಕೆಗಾಗಿ ತಾತ್ವಿಕ ಅನುಮೋದನೆಯನ್ನು ನೀಡಿತ್ತು.
ಮ್ಯಾಡಿಸನ್ ಪೆಸಿಫಿಕ್ ಟ್ರಸ್ಟ್ ಲಿ. ಮತ್ತು ಎಸ್‌ಬಿಐಕ್ಯಾಪ್ ಟ್ರಸ್ಟಿ ಕಂಪೆನಿ ಲಿ. ಬಾಂಡ್ ಬಿಡುಗಡೆಯನ್ನು ನಿರ್ವಹಿಸಿದ್ದವು. ಮ್ಯಾಡಿಸನ್ ಪೆಸಿಫಿಕ್ ಅನ್ನು ನೋಟ್ಟ್ರ ಸ್ಟಿಯಾಗಿ ನಿಯೋಜಿಸಲಾಗಿತ್ತು.

25 ವರ್ಷಗಳ ಅವಧಿಯ ಪ್ರಸರಣ ಪರವಾನಿಗೆ 2036, ಆ.15ರವರೆಗೆ ಮಾನ್ಯತೆಯನ್ನು ಹೊಂದಿದೆ ಮತ್ತು ಅದಾನಿ ಹೇಳಿಕೊಂಡಿರುವಂತೆ 'ಕನಿಷ್ಠ ವೆಚ್ಚದಲ್ಲಿ' ಇನ್ನಷ್ಟು ವಿಸ್ತರಿಸಬಹುದಾಗಿದೆ. ಎಇಎಂಎಲ್‌ನ ಸ್ಥಿರಾಸ್ತಿಗಳನ್ನು ವಿಲೇವಾರಿ ಮಾಡುವುದಿಲ್ಲ ಎಂದು ಮುಚ್ಚಳಿಕೆಯನ್ನೂ ಅದಾನಿ ಗ್ರೂಪ್ ನೀಡಿದೆ. ಬಾಂಡ್ ಹೋಲ್ಡರ್‌ಗಳಿಗೆ ಬದ್ಧತೆಗಳನ್ನು ಅಂಡರ್‌ರೈಟ್ ಮಾಡಲು ಕರಾರುಬದ್ಧ ಗುಂಪನ್ನು ಅದಾನಿಗಳು ರಚಿಸಿದ್ದು, ಇದು ಎಇಎಂಎಲ್ ಮತ್ತು ಪವರ್ ಡಿಸ್ಟ್ರಿಬ್ಯೂಷನ್ ಸರ್ವಿಸಸ್ ಲಿ.(ಪಿಡಿಎಸ್‌ಎಲ್) ಅನ್ನು ಒಳಗೊಂಡಿದೆ. ಡಿಸೆಂಬರ್ 2019ರಲ್ಲಿ ಸ್ಥಾಪನೆಗೊಂಡ ಪಿಡಿಎಸ್‌ಎಲ್ ಅಹ್ಮದಾಬಾದ್‌ನ ಅದಾನಿ ಹೌಸ್‌ನಲ್ಲಿ ತನ್ನ ನೋಂದಾಯಿತ ಕಚೇರಿಯನ್ನು ಹೊಂದಿದೆ.

ಎಇಎಂಎಲ್ ಮತ್ತು ಪಿಡಿಎಸ್‌ಎಲ್ ಅದಾನಿ ಟ್ರಾನ್ಸ್‌ಮಿಷನ್‌ನ ಅಂಗಸಂಸ್ಥೆಗಳಾಗಿದ್ದು, ಎಸ್‌ಬಿ ಅದಾನಿ ಫ್ಯಾಮಿಲಿ ಟ್ರಸ್ಟ್ (ಎಸ್‌ಬಿಎಎಫ್‌ಟಿ) ಅಂತಿಮ ಹೋಲ್ಡಿಂಗ್ ಸಂಸ್ಥೆಯಾಗಿದೆ.
ಹೆಚ್ಚು ಅಶುಭಸೂಚಕವಾಗಿ ಮತ್ತು ಅದಾನಿಗಳ ಮೇಲೆ ಸ್ಟಾಕ್ ಅಥವಾ ಮಾರ್ಜಿನ್ ಬದ್ಧತೆಗಳನ್ನು ಹೆಚ್ಚಿಸುವಂತೆ ಒತ್ತಡವನ್ನು ಹೇರಿರುವ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ 'ಮೇಲಾಧಾರವು ಭವಿಷ್ಯದಲ್ಲಿ ವಿತರಕನ ಇತರ ಗ್ರೂಪ್ ಸಂಸ್ಥೆಗಳು ರಚಿಸಬಹುದಾದ ಇಂತಹ ಭದ್ರತಾ ಆಸಕ್ತಿಯನ್ನೂ ಒಳಗೊಂಡಿರುತ್ತದೆ ಮತ್ತು ಇಂತಹ ಮೇಲಾಧಾರವನ್ನು ಇದೇ ರೀತಿಯಲ್ಲಿ ಕಂಪೆನಿಯ ಇತರ ಸಾಲದಾತರೊಂದಿಗೆ ಹಂಚಿಕೊಳ್ಳಲಾಗುತ್ತದೆ' ಎಂದು ಶೇರು ವಿನಿಮಯ ಕೇಂದ್ರಗಳಿಗೆ ಸಲ್ಲಿಸಿರುವ ಫೈಲಿಂಗ್‌ನಲ್ಲಿ ಹೇಳಲಾಗಿದೆ.

ಖತರ್ ತಿರುವು
100 ಕೋಟಿ ಡಾಲರ್‌ಗಳ ಎಸ್‌ಎಸ್‌ಎನ್ ಬಿಡುಗಡೆಗೆ ಮುನ್ನ ಅದಾನಿಗಳು ಖತರ್ ಹೋಲ್ಡಿಂಗ್ ಎಲ್‌ಎಲ್‌ಸಿಯೊಂದಿಗೆ ಖಚಿತ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದರು. ಈ ಒಪ್ಪಂದದಡಿ ಸುಮಾರು 450 ಮಿಲಿಯನ್ ಡಾಲರ್‌ಗಳನ್ನು (3,200 ಕೋ.ರೂ.) ಹೂಡಿಕೆ ಮಾಡಿದ್ದ ಖತರ್ ಹೋಲ್ಡಿಂಗ್ ಎಇಎಂಎಲ್‌ನ ಆಡಳಿತ ಮಂಡಳಿಯಲ್ಲಿ ಎರಡು ಸ್ಥಾನಗಳು ಮತ್ತು ಶೇ.25.1ರಷ್ಟು ಶೇರುಗಳನ್ನು ಪಡೆದುಕೊಂಡಿತ್ತು.
450 ಮಿ.ಡಾ.ಗಳ ಪಾವತಿಯು ಸುಮಾರು 282 ಮಿ.ಡಾ.ಗಳಷ್ಟು ಶೇರುದಾರ ಸಂಯೋಜಿತ ಸಾಲವನ್ನು ಒಳಗೊಂಡಿದೆ. ಈ ಅಧೀನ ಸಾಲದಿಂದ ಬಂದಿದ್ದ ಹಣವನ್ನು ಎಇಎಂಎಲ್‌ನ ಅಸ್ತಿತ್ವದಲ್ಲಿದ್ದ ಹಳೆಯ ಸಾಲವನ್ನು ತೀರಿಸಲು ಬಳಸಲಾಗಿತ್ತು.
ಕುತೂಹಲಕಾರಿ ಅಂಶವೆಂದರೆ ಅದಾನಿಗಳು 100 ಕೋ.ರೂ.ಗಳ ಎಸ್‌ಎಸ್‌ಎನ್ ಮೂಲಕ ಹಣ ಸಂಗ್ರಹಿಸಲು ನಿರ್ಧರಿಸಿದಾಗ ಖತರ್ ಕಂಪೆನಿಯೂ ಎಇಎಂಎಲ್‌ನಲ್ಲಿಯ ತನ್ನ ಶೇ.25.1 ರಷ್ಟು ಶೇರುಗಳನ್ನು ಅಡವಿರಿಸಿತ್ತು.
ಶೇರುದಾರ ಸಂಯೋಜಿತ ಸಾಲವಾಗಿ ಕಳೆದ ವರ್ಷದ ಮಾ.31ಕ್ಕೆ ಇದ್ದಂತೆ ಖತರ್ ಹೋಲ್ಡಿಂಗ್ ಎಲ್‌ಎಲ್‌ಸಿಗೆ 2,137.35 ಕೋ.ರೂ.ಗಳನ್ನು ಪಾವತಿಸಬೇಕಿದೆ ಎಂದು ಎಇಎಂಲ್‌ನ ವಾರ್ಷಿಕ ವರದಿಯು ತೋರಿಸಿದೆ.
ಸಾಲ ಮರುಪಾವತಿಸಲು ವಿಫಲಗೊಂಡ ಸಂದರ್ಭದಲ್ಲಿ ಎಸ್‌ಎಸ್‌ಎನ್‌ಗಳನ್ನು ಹೊಂದಿರುವವರು ದಾವೆಗಳನ್ನು ಹೂಡಲು ಅಥವಾ ಯಾವುದೇ ಕಾನೂನು ಕ್ರಮ ಅಥವಾ ಮಧ್ಯಸ್ಥಿಕೆಗಳಿಗೆ ಸೇರಲು ಸ್ವತಂತ್ರರಿರುತ್ತಾರೆ.

ಕೆಲವು ಘಟನೆಗಳ ಸಂಭವಿಸುವಿಕೆಯ ಮೇಲಿನ ಸಾಲವನ್ನು ಪೂರ್ವಪಾವತಿ ಮಾಡುವ ಬಾಧ್ಯತೆಯೊಂದಿಗೆ 7,364.53 ಕೋ.ರೂ.ಗಳ ಶೇ. 3.949 ಬಾಂಡ್‌ಗಳನ್ನು 2030 ಫೆಬ್ರವರಿಯಲ್ಲಿ ಮರುಪಾವತಿಸಲಾಗುವುದು. ಪ್ರೀಮಿಯಂ ಪಾವತಿಯ ಮೇಲೆ ಬಾಂಡ್ ಪೂರ್ವಪಾವತಿಯನ್ನು ಗ್ರೂಪ್ ಸ್ವಯಂಪ್ರೇರಿತವಾಗಿ ಮಾಡಬಹುದು ಎಂದು ಅದಾನಿ ಟ್ರಾನ್ಸ್‌ಮಿಷನ್ 2021-22ನೇ ಸಾಲಿನ ವಾರ್ಷಿಕ ವರದಿಯಲ್ಲಿ ಹೇಳಿದೆ.
ಹಿಂಡನ್‌ಬರ್ಗ್ ವರದಿಯ ಬಳಿಕ ಈ ಹಲವು ಸಾಧನಗಳ ಮಾರುಕಟ್ಟೆ ವೌಲ್ಯ ಕುಸಿದ ಬಳಿಕ ಬಾಂಡ್ ಹೋಲ್ಡರ್‌ಗಳ ಕಳವಳಗಳನ್ನು ಶಮನಗೊಳಿಸಲು ಅದಾನಿಗಳು ಈಗ ಹರಸಾಹಸ ಪಡುತ್ತಿದ್ದಾರೆ.

ಅಮೆರಿಕದ ಈಕ್ವಿಟಿ ಸಂಸ್ಥೆ ಜಿಕ್ಯೂಜಿ ಪಾರ್ಟನರ್ಸ್‌ಗೆ ತನ್ನ ನಾಲ್ಕು ಕಂಪೆನಿಗಳ ಶೇರುಗಳ ಮಾರಾಟದ ಬಳಿಕ 15,446 ಕೋ.ರೂ.ಗಳನ್ನೆತ್ತಲು ಅದಾನಿ ಗೂಪ್‌ಗೆ ಸಾಧ್ಯವಾಗಿದೆ. ಈ ಒಪ್ಪಂದದಡಿ ಅಮೆರಿಕದ ಸಂಸ್ಥೆಯು ಪ್ರವರ್ತಕರಿಂದ 2.84 ಕೋ.(ಶೇ.2.54) ಶೇರುಗಳನ್ನು 1,898 ಕೋ.ರೂ.ಗಳಿಗೆ ಖರೀದಿಸಿದೆ. ಜಿಕ್ಯೂಜಿ ಪಾರ್ಟ್‌ನರ್ಸ್‌ನಿಂದ 1,898 ಕೋ.ರೂ.ಗಳನೆತ್ತಿದ ಬಳಿಕ 100 ಶತಕೋಟಿ ಡಾ.ಸಾಲವನ್ನು ಪೂರ್ವಪಾವತಿಸುವ ಆಯ್ಕೆಯನ್ನು ಚಲಾಯಿಸಲು ಅದಾನಿಗಳು ಉದ್ದೇಶಿಸಿದ್ದಾರೆ ಎನ್ನುವುದಕ್ಕೆ ಯಾವುದೇ ಸೂಚನೆಗಳಿಲ್ಲ. ಡಿಫಾಲ್ಟ್‌ನ ಸಂದರ್ಭದಲ್ಲಿ ಜಾರಿ ಕ್ರಮದ ವಿರುದ್ಧ ಅದಾನಿಗಳು ತಮ್ಮನ್ನು ಸುರಕ್ಷಿತಗೊಳಿಸಿಕೊಂಡಿದ್ದಾರೆ. ಎಸ್‌ಎಸ್‌ಡಿ ಬಿಡುಗಡೆಯ ದಾಖಲೆಯಲ್ಲಿ ಎಲ್ಲ ಅಪಾಯದ ಅಂಶಗಳನ್ನು ಪಟ್ಟಿ ಮಾಡುವಾಗ ಅದಾನಿ ಟ್ರಾನ್ಸ್‌ಮಿಷನ್, ಡಿಫಾಲ್ಟ್‌ನ ಯಾವುದೇ ಸಂದರ್ಭವು ಸಾಲದಾತರು ತಮ್ಮ ಭದ್ರತೆಗಳನ್ನು ಜಾರಿಗೊಳಿಸಲು ಮತ್ತು ಆಧಾರವಾಗಿರುವ ಸ್ವತ್ತುಗಳನ್ನು ವಶಪಡಿಸಿಕೊಳ್ಳಲು ಕಾರಣವಾಗುತ್ತದೆ ಎಂದು ಹೇಳಿದೆ. ಆದರೆ ಇದು ಸುಲಭವಲ್ಲ, ಏಕೆಂದರೆ ಅದಾನಿಗಳ ವಿರುದ್ಧ ಕ್ರಮವನ್ನು ಜಾರಿಗೊಳಿಸುವುದು ಸುದೀರ್ಘ ಕಾರ್ಯವಿಧಾನವಾಗಿದೆ.

ಈ ಹಿಂದೆಯೂ ಮುಂಬೈ ಇಂತಹ ದುಃಸ್ವಪ್ನವನ್ನು ಎದುರಿಸಿತ್ತು. 2020,ಅ.12ರಂದು ವಿದ್ಯುತ್ ಜಾಲ ಕುಸಿತದಿಂದಾಗಿ ಬೃಹತ್ ವಿದ್ಯುತ್ ನಿಲುಗಡೆಯುಂಟಾಗಿತ್ತು. ನಗರಕ್ಕೆ ವಿದ್ಯುತ್ತನ್ನು ಮರು ಪೂರೈಕೆ ಮಾಡಲು ಎಇಎಂಎಲ್‌ಗೆ ಒಂಭತ್ತು ಗಂಟೆಗಳೇ ಬೇಕಾಗಿದ್ದವು. ಅದಾನಿ ಗ್ರೂಪ್‌ನಿಂದ ಪಾವತಿ ಡಿಫಾಲ್ಟ್ ಸಂದರ್ಭದಲ್ಲಿ ತಾವು ಗಾಢಾಂಧಕಾರ ಮತ್ತು ಭಯಂಕರ ಅನಿಶ್ಚಿತತೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದು ಗೊತ್ತಾದರೆ ಮುಂಬೈನ ವಿದ್ಯುತ್ ಬಳಕೆದಾರರು ತೀವ್ರ ಆಕ್ರೋಶಗೊಳ್ಳುವುದು ಖಚಿತವಾಗಿದೆ.

Similar News