×
Ad

ಇನ್ಸ್ಟಾಗ್ರಾಂ ರೀಲ್‌ ಚಿತ್ರೀಕರಿಸುವ ವೇಳೆ ಅಪಘಾತ: ಮಹಿಳೆ ಸಾವು, ಇಬ್ಬರ ಬಂಧನ

Update: 2023-03-08 19:48 IST

ಪುಣೆ: ಬೈಕ್‌ನಲ್ಲಿ ಇನ್ಸ್ಟಾಗ್ರಾಮ್‌ಗೆ ರೀಲ್‌ ವಿಡಿಯೋ ಚಿತ್ರೀಕರಿಸುವ ಭರದಲ್ಲಿ ಅಪಘಾತ ಉಂಟು ಮಾಡಿ ಮಹಿಳೆಯೊಬ್ಬರ ಸಾವಿಗೆ ಕಾರಣರಾದ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಪುಣೆಯ ಮುಹಮ್ಮದ್ ವಾಡಿ ಪ್ರದೇಶದ ಕೃಷ್ಣನಗರದ ಪಾಲ್ಖಿ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಮೃತರನ್ನು ಸೋಲಾಪುರ ಜಿಲ್ಲೆಯ ಬರ್ಶಿ ಮೂಲದ ತಸ್ಲೀಮ್ ಫಿರೋಝ್ ಪಠಾಣ್ (31) ಎಂದು ಗುರುತಿಸಲಾಗಿದೆ. ಅವರು ಪುಣೆಯ ಆದರ್ಶ ನಗರದಲ್ಲಿ ನೆಲೆಸಿದ್ದರು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಮಂಗಳವಾರ ವನವಾಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಬಂಧಿತರನ್ನು ಅಯಾನ್ ಶಹನೂರ್ ಶೇಖ್ (21) ಮತ್ತು ಝೈದ್ ಜಾವೇದ್ ಶೇಖ್ (22) ಎಂದು ಗುರುತಿಸಲಾಗಿದ್ದು, ಇಬ್ಬರೂ ಹಡಪ್ಸರ್‌ನ ಸಯ್ಯದ್ ನಗರದ ನಿವಾಸಿಗಳಾಗಿದ್ದಾರೆ. 

ಅಯಾನ್ ಎಂಬಾತ ಪಾಲ್ಖಿ ರಸ್ತೆಯಲ್ಲಿ ಹೆಚ್ಚಿನ ವೇಗದಲ್ಲಿ ಬೈಕ್ ಅನ್ನು ಚಲಾಯಿಸಿದ್ದು, ಹಿಂಬದಿ ಸವಾರ ಝೈದ್ ರೀಲ್ಸ್ ಗೆ ವೀಡಿಯೊವನ್ನು ರೆಕಾರ್ಡ್ ಮಾಡುತ್ತಿದ್ದ. ವೇಗದ ಭರಕ್ಕೆ ಮತ್ತೊಂದು ದ್ವಿಚಕ್ರ ವಾಹನಕ್ಕೆ ಬೈಕ್ ಢಿಕ್ಕಿ ಹೊಡೆದಿದ್ದು, ಅದನ್ನು ಚಲಾಯಿಸುತ್ತಿದ್ದ ತಸ್ಲೀಂ ಪಠಾಣ್ ಮೃತಪಟ್ಟಿದ್ದಾರೆ ತನಿಖಾಧಿಕಾರಿ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಜಯವಂತ್ ಜಾಧವ್ ತಿಳಿಸಿದ್ದಾರೆ.

Similar News