ಜೈಲಿನಲ್ಲಿ ಸಿಸೋಡಿಯಾರನ್ನು ಘೋರ ಅಪರಾಧಿಗಳ ಜೊತೆ ಇರಿಸಿದ ಕೇಂದ್ರ: ಎಎಪಿ ಆರೋಪ
ತಿರುವನಂತಪುರ, ಮಾ. 8: ಮನೀಷ್ ಸಿಸೋಡಿಯಾ ಅವರನ್ನು ತಿಹಾರ್ ಜೈಲಿನ ಘೋರ ಅಪರಾಧಿಗಳು ಇರುವ ಸೆಲ್ ಸಂಖ್ಯೆ 1ರಲ್ಲಿ ಇರಿಸಲಾಗಿದ್ದು, ಅವರ ಜೀವಕ್ಕೆ ಅಪಾಯ ತರಲು ಕೇಂದ್ರ ಸರಕಾರ ಸಂಚು ರೂಪಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ)ದ ಶಾಸಕ ಸೌರಭ್ ಭಾರದ್ವಾಜ್ ಅವರು ಆರೋಪಿಸಿದ್ದಾರೆ.
ವಿಪಾಸನಾ ಸೆಲ್‌ನಲ್ಲಿ ಇರಿಸುವಂತೆ ನ್ಯಾಯಾಲಯ ಆದೇಶ ನೀಡಿದ ಹೊರತಾಗಿಯೂ ಸಿಸೋಡಿಯಾ ಅವರನ್ನು ಸೆಲ್ ಸಂಖ್ಯೆ 1ರಲ್ಲಿ ಇರಿಸಿರುವುದರ ಬಗ್ಗೆ ಅವರು ಕಾರಾಗೃಹದ ಆಡಳಿತವನ್ನು ಪ್ರಶ್ನಿಸಿದ್ದಾರೆ.
ಸಿಸೋಡಿಯಾ ಅವರನ್ನು ಧ್ಯಾನ ಮಾಡಬಹುದಾದ ಸೆಲ್‌ನಲ್ಲಿ ಇರಿಸಬೇಕು ಎಂದು ದಿಲ್ಲಿ ನ್ಯಾಯಾಲಯ ಸ್ಪಷ್ಟವಾಗಿ ನಿರ್ದೇಶಿಸಿದೆ ಎಂದು ಸೌರಭ್ ಭಾರದ್ವಾಜ್ ಅವರು ಗಮನ ಸೆಳೆದಿದ್ದಾರೆ.
‘‘ಬಿಜೆಪಿ ಸರಕಾರ ಉದ್ದೇಶ ಪೂರ್ವಕವಾಗಿ ಸಿಸೋಡಿಯಾ ಅವರನ್ನು ತಿಹಾರ್ ಜೈಲಿನ ಘೋರ ಅಪರಾಧಿಗಳು ಇರುವ ಸೆಲ್‌ನಲ್ಲಿ ಇರಿಸಿದೆ. ಇದು ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ಸರಕಾರದ ಸೇಡಿನ ಮನೋಭಾವದ ಸ್ಪಷ್ಟ ಸಂಕೇತವಾಗಿದೆ’’ ಎಂದು ಅವರು ಹೇಳಿದ್ದಾರೆ.
‘‘ಜೈಲ್ ಸಂಖ್ಯೆ 1ರಲ್ಲಿ ಕೊಲೆ ಪ್ರಕರಣದ ಅಪರಾಧಿಗಳು ಇದ್ದಾರೆ. ಅತ್ಯಂತ ಕಠಿಣ ಕ್ರಿಮಿನಲ್‌ಗಳು ಇದ್ದಾರೆ. ಅವರಲ್ಲಿ ಕೆಲವರು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ.
‘‘ಅವರ (ಸಿಸೋಡಿಯಾ ಅವರ ಸಹ ಕೈದಿಗಳು)ವಿರುದ್ಧ ಈಗಾಗಲೇ ಹಲವು ಕೊಲೆ ಪ್ರಕರಣಗಳು ದಾಖಲಾಗಿವೆ. ಇನ್ನೊಂದು ಕೊಲೆ ಪ್ರಕರಣ ದಾಖಲಾದರೂ ಅವರಿಗೆ ತೊಂದರೆ ಇಲ್ಲ. ಇದು ಮನೀಷ್ ಸಿಸೋಡಿಯಾ ಅವರ ಸುರಕ್ಷೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟು ಹಾಕಿದೆ’’ ಎಂದು ಸೌರಭ್ ಭಾರದ್ವಾಜ್ ತಿಳಿಸಿದ್ದಾರೆ.