×
Ad

ಮಾ.10ರಿಂದ ಎಂಐಸಿಯ ‘ನಮ್ಮ ಅಂಗಡಿ’ ಪ್ರದರ್ಶನ-ಮಾರಾಟ ಮೇಳ

Update: 2023-03-09 18:27 IST

ಉಡುಪಿ, ಮಾ.9: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (ಎಂಐಸಿ) ಎಂಕಳೆದ 19 ವರ್ಷಗಳಿಂದ ಕನ್ಸರ್ನ್ಡ್ ಫಾರ್ ದಿ ವರ್ಕಿಂಗ್ ಚಿಲ್ಟ್ರನ್ (ಸಿಡಬ್ಲುಸಿ) ಹಾಗೂ ಕುಂದಾಪುರದ ‘ನಮ್ಮ ಭೂಮಿ’ಯ ಸಹಯೋಗದಲ್ಲಿ ಆಯೋಜಿ ಸುತ್ತಿರುವ ‘ನಮ್ಮ ಅಂಗಡಿ’ ಪ್ರದರ್ಶನ ಹಾಗೂ ಮಾರಾಟ ಮೇಳ ಮಾ.10ರಿಂದ 12ರವರೆಗೆ ಎಂಐಸಿಯ ಆವರಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಂಯೋಜಕಿ ಡಾ.ಮಂಜುಳಾ ವೆಂಕಟರಾಘನ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಭೂಮಿಯ ದುಡಿಯುವ ಮಕ್ಕಳು ತಯಾರಿಸಿದ ವಿವಿಧ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಮಾ.10ರ ಶುಕ್ರವಾರ ಬೆಳಗ್ಗೆ  9:00ಗಂಟೆಗೆ ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ಮಧು ವೀರರಾಘವನ್ ಉದ್ಘಾಟಿಸುವರು ಎಂದರು.

ಈ ಕಾರ್ಯಕ್ರಮವನ್ನು ನಮ್ಮ ಭೂಮಿಯಲ್ಲಿರುವ ಮಕ್ಕಳ ಸಬಲೀಕರಣ ಹಾಗೂ ಅವರಿಗೆ ಜೀವನ ಕೌಶಲ್ಯಗಳನ್ನು ಕಲಿಸುವ ಗುರಿಯೊಂದಿಗೆ ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.

ನಮ್ಮ ಭೂಮಿಯಲ್ಲಿ ಮಕ್ಕಳು ಹಾಗೂ ಕುಶಲಕರ್ಮಿಗಳು ತಯಾರಿಸುವ ವಿವಿಧ ವೈವಿಧ್ಯಮಯ ವಸ್ತು ಹಾಗೂ ಉತ್ಪನ್ನಗಳನ್ನು ಪ್ರದರ್ಶಿಸಲು ಹಾಗೂ ಮಾರಾಟ ಮಾಡಲು ನಮ್ಮ ಅಂಗಡಿ ಮೂಲಕ ಅವಕಾಶ ನೀಡಲಾಗುತ್ತದೆ. ಕಳೆದ ವರ್ಷ ಈ ಮೇಳದಿಂದ 26 ಲಕ್ಷ ರೂ.ಗಳನ್ನು ಸಂಗ್ರಹಿಸಲಾಗಿದ್ದು, ಈ ವರ್ಷ ಸುಮಾರು 30 ಲಕ್ಷ ರೂ.ಗಳನ್ನು ಸಂಗ್ರಹಿಸಲಾಗುತ್ತದೆ. ಇಲ್ಲಿ ಸಂಗ್ರಹವಾದ ಎಲ್ಲಾ ಹಣವನ್ನು ನಮ್ಮ ಭೂಮಿಗೆ ನೀಡಲಾಗುತ್ತದೆ ಎಂದು ಡಾ.ಮಂಜುಳಾ ತಿಳಿಸಿದರು.

ಈ ಬಾರಿ 25ರಿಂದ 30 ಸ್ಟಾಲ್‌ಗಳನ್ನು ತೆರೆಯಲಾಗುತ್ತದೆ. ಇಲ್ಲಿ ಎಲ್ಲಾ ವಯೋಮಾನದವರಿಗೂ ಒಪ್ಪಿಗೆ ಯಾಗುವ ಕೈಯಿಂದ ನೆಯ್ದ ಸಿದ್ಧ ಉಡುಪುಗಳು, ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ವಸ್ತುಗಳೊಂದಿಗೆ ಈ ಬಾರಿ ವಿಶೇಷವಾಗಿ ಲ್ಯಾಪ್‌ಟಾಪ್ ಬ್ಯಾಗ್, ಸ್ಕಾರ್ಫ್‌ಗಳು ಮುಂತಾದ ಹೊಸ ವಸ್ತುಗಳ ಪ್ರದರ್ಶನ ಹಾಗೂ ಮಾರಾಟವಿರುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಂಐಸಿಯ ಕಾರ್ಪೋರೇಟ್ ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ಡಾ.ಪದ್ಮಕುಮಾರ್ ಕೆ., ವಿದ್ಯಾರ್ಥಿ ಪ್ರತಿನಿಧಿಗಳಾದ ಅದಿತಿ ಶ್ರೀವಾಸ್ತವ, ಕಾವ್ಯ ವಿ., ಶ್ರುತಿ ಉಪಸ್ಥಿತರಿದ್ದರು.

Similar News