×
Ad

ಕಾಶ್ಮೀರಿ ವಿದ್ಯಾರ್ಥಿಗಳಿಗೆ ಪಾಕ್ ಮೆಡಿಕಲ್ ಸೀಟುಗಳ ಮಾರಾಟ ಆರೋಪ: ಕಾಶ್ಮೀರದ ಮೂರು ಸ್ಥಳಗಳಲ್ಲಿ ಈ.ಡಿ. ದಾಳಿ

Update: 2023-03-09 21:01 IST

ಶ್ರೀನಗರ, ಮಾ.9: ಕಾಶ್ಮೀರಿ ವಿದ್ಯಾರ್ಥಿಗಳಿಗೆ ಪಾಕಿಸ್ತಾನದಲ್ಲಿ ಎಂಬಿಬಿಎಸ್ ಸೀಟುಗಳನ್ನು ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲಿ ಜಾರಿ ನಿರ್ದೇಶನಾಲಯ (ಈ.ಡಿ.)ವು ಜಮ್ಮುಕಾಶ್ಮೀರದ ಮೂರು ಸ್ಥಳಗಳಲ್ಲಿ ಗುರುವಾರ ದಾಳಿಗಳನ್ನು ನಡೆಸಿದೆ. ಹುರಿಯತ್ ಮುಖಂಡರ ಕೆಲವು ಮನೆಗಳ ಮೇಲೆ ದಾಳಿಗಳನ್ನು ನಡೆಸಲಾಗಿದೆಯೆಂದು ಪಿಟಿಐ ರದಿಯೊಂದು ತಿಳಿಸಿದೆ.

ಆನಂತನಾಗ್ ನ ಖ್ವಾಝಿ ಯಾಸಿರ್, ಬಾಗೆ ಮೆಹ್ತಾಬ್ ಪ್ರದೇಶದಲ್ಲಿರುವ ಜಮ್ಮುಕಾಶ್ಮೀರ ವಿಮೋಚನಾ ಚಳವಳಿಯ ಅಧ್ಯಕ್ಷ ಝಫರ್ ಭಟ್ ಮತ್ತು ಆನಂತನಾಗ್ ನ ಮಟ್ಟಾನ್ ಪ್ರದೇಶದಲ್ಲಿರುವ ಮೊಹಮ್ಮದ್ ಇಕ್ಬಾಲ್ ಖ್ವಾಜಾ ಅವರು ನಿವಾಸಗಳ ಮೇಲೆ ದಾಳಿಗಳನ್ನು ನಡೆಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿನ ಎಂಬಿಬಿಎಸ್ ಸೀಟುಗಳನ್ನು ಕಾಶ್ಮೀರಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲಾಗ್ತಿ ಮತ್ತು ಅದರಿಂದ ದೊರೆಯುವಹಣವನ್ನು ಉಗ್ರಗಾಮಿ ಚಟುವಟಿಕೆಗಳಿಗೆ ಧನಸಹಾಯ ಮಾಡಲು ಬಳಸಲಾಗುತ್ತಿತ್ತೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯ್ದೆ (ಯುಎಪಿಎ) ಹಾಗೂ ಭಾರತೀಯ ದಂಡಸಂಹಿತೆಯ ಸೆಕ್ಷನ್ 420 (ವಂಚನೆ ಹಾಗೂ ಸೊತ್ತುಗಳ ಪೂರೈಕೆಯಲ್ಲಿ ಅಪ್ರಾಮಾಣಿಕತೆ) ಅಡಿ ಝಾಫರ್ ಭಟ್ ಹಾಗೂ ಇತರ ಏಳು ಮಂದಿಯ ವಿರುದ್ಧ 2022ರ ಮೇ ತಿಂಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ನ್ಯಾಯಾಲಯವು ದೋಷಾರೋಪಗಳನ್ನು ದಾಖಲಿಸಿಕೊಂಡಿತ್ತು.

Similar News