ಬಿಹಾರ: ಗೋಮಾಂಸ ಸಾಗಾಟದ ಶಂಕೆ; ವ್ಯಕ್ತಿಯ ಥಳಿಸಿ ಹತ್ಯೆ‌

Update: 2023-03-09 17:06 GMT

ಪಾಟ್ನಾ, ಮಾ. 9: ಗೋಮಾಂಸ ಸಾಗಾಟ ಮಾಡುತ್ತಿದ್ದಾನೆ ಎಂಬ ಶಂಕೆಯಲ್ಲಿ ವ್ಯಕ್ತಿಯೋರ್ವನನ್ನು ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ಬಿಹಾರದ ಸರಣ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 
ಮೃತಪಟ್ಟ ವ್ಯಕ್ತಿಯನ್ನು ನಶೀಮ್ ಖುರೇಶಿ ಎಂದು ಗುರುತಿಸಲಾಗಿದೆ. ಇವರು ನೆರೆಯ ಸಿವಾನ್ ಜಿಲ್ಲೆಯ ಹಸನ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎಚ್.ಎಂ. ನಗರ್‌ನ ನಿವಾಸಿ.

‘‘ಖುರೇಶಿ ಹಾಗೂ ಅವರ ಸೋದರಳಿಯ ಹೋಳಿ ಹಬ್ಬ (ಮಾರ್ಚ್ 8) ದ ದಿನ ಸಿವಾನ್‌ನ ರಸೂಲ್‌ಪುರದ ಮೂಲಕ ಜೋಗಿಯಾ ಗ್ರಾಮಕ್ಕೆ ತೆರಳುತ್ತಿದ್ದರು. ಈ ಸಂದರ್ಭ ಬ್ಯಾಗ್‌ನಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂದು ಶಂಕಿಸಿ ಗ್ರಾಮಸ್ಥರ ಗುಂಪೊಂದು ಅವರನ್ನು ತಡೆದು ನಿಲ್ಲಿಸಿತು. ಅವರೊಂದಿಗೆ ಇತರ ಹಲವು ಗ್ರಾಮಸ್ಥರು  ಕೂಡ ಸೇರಿದರು. ಕೊಂಡೊಯ್ಯುತ್ತಿರುವ ಗೋಮಾಂಸವನ್ನು ತೋರಿಸುವಂತೆ ತಿಳಿಸಿದರು. ಆದರೆ, ಅವರು ಬ್ಯಾಗ್ ತೋರಿಸಲು ನಿರಾಕರಿಸಿದಾಗ, ಗ್ರಾಮಸ್ಥರು ಅವರ ಮೇಲೆ ದಾಳಿ ನಡೆಸಿದರು. ಬಿದಿರಿನ ಬೆತ್ತ ಹಾಗೂ ಕಬ್ಬಿಣದ ಸರಳಿನಿಂದ ಹಲ್ಲೆ ನಡೆಸಿದರು’’ ಎಂದು ಸಂತ್ರಸ್ತರ ಕುಟುಂಬ ಆರೋಪಿಸಿದೆ. 

‘‘ನನ್ನ ಕಿರಿಯ ಸೋದರಳಿಯ ಗುಂಪಿನಿಂದ ಬಿಡಿಸಿಕೊಂಡು ಪರಾರಿಯಾದ. ಖುರೇಶಿ ನೆಲದ ಮೇಲೆ ಕುಸಿದು ಬೀಳುವ ವರೆಗೆ ಗುಂಪು ನಿರ್ದಯವಾಗಿ ಥಳಿಸಿತು. ಗಂಭೀರ ಗಾಯಗೊಂಡ ಖುರೇಶಿಯನ್ನು ಪಾಟ್ನಾದ ಆಸ್ಪತ್ರೆಗೆ ಕೊಂಡೊಯ್ಯುವಾಗ ದಾರಿ ಮಧ್ಯೆ ಮೃತಪಟ್ಟ ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ. ಆದರೆ, ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸುವ ಮುನ್ನವೇ ಖುರೇಶಿ ಸಾವನ್ನಪ್ಪಿದ್ದ ಎಂದು ಅಲ್ಲಿನ ಕೆಲವು ಸ್ಥಳೀಯರು ನಮಗೆ ತಿಳಿಸಿದ್ದಾರೆ’’ ಎಂದು ಖುರೇಶಿ ಅವರು ಹತ್ತಿರದ ಸಂಬಂಧಿ ಮುನ್ನಾ ತಿಳಿಸಿದ್ದಾರೆ. 

‘‘ಗೋಮಾಂಸ ಸಾಗಾಟದ ಶಂಕೆಯಲ್ಲಿ ವ್ಯಕ್ತಿಯೋರ್ವನನ್ನು 12ಕ್ಕೂ ಅಧಿಕ ಗ್ರಾಮಸ್ಥರನ್ನು ಒಳಗೊಂಡ ಗುಂಪೊಂದು ಥಳಿಸಿ ಹತ್ಯೆಗೈದಿದೆ. ಈ ಘಟನೆಯ ಕುರಿತು ಮಾಹಿತಿ ದೊರಕಿದ ಕೂಡಲೇ ಪೊಲೀಸರು ಮೂವರನ್ನು ಬಂಧಿಸಿದ್ದಾರೆ’’ ಎಂದು ರಸೂಲ್‌ಪುರ ಪೊಲೀಸ್ ಠಾಣೆಯ ಮೇಲ್ವಿಚಾರಣಾ ಅಧಿಕಾರಿ ಆರ್.ಸಿ. ತಿವಾರಿ ಅವರು ತಿಳಿಸಿದ್ದಾರೆ. 

ಘಟನೆಯ ಹಿನ್ನೆಲೆಯಲ್ಲಿ ರಸೂಲ್‌ಪುರ ಉದ್ವಿಗ್ನಗೊಂಡಿದೆ ಎಂಬ ಸುದ್ದಿಯನ್ನು ತಿವಾರಿ ಅವರು ನಿರಾಕರಿಸಿದ್ದಾರೆ. 

Similar News