ಮಾಜಿ ಅಗ್ನಿವೀರರಿಗೆ ಬಿಎಸ್‌ಎಫ್‌ನಲ್ಲಿ ಶೇಕಡ 10 ಮೀಸಲಾತಿ

Update: 2023-03-10 04:31 GMT

ಹೊಸದಿಲ್ಲಿ: ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡುವ ವೇಳೆ ಮಾಜಿ ಅಗ್ನಿವೀರರಿಗೆ ಶೇಕಡ 10ರಷ್ಟು ಮೀಸಲಾತಿಯನ್ನು ನಿಗದಿಪಡಿಸಿ ಕೇಂದ್ರ ಗೃಹ ಸಚಿವಾಲಯ ಗುರುವಾರ ಆದೇಶ ಹೊರಡಿಸಿದೆ. ಇದರ ಜತೆಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ. ಅಗ್ನಿವೀರರು ಮೊದಲ ಬ್ಯಾಚ್ ಅಭ್ಯರ್ಥಿಗಳೇ ಅಥವಾ ಬಳಿಕದ ಬ್ಯಾಚ್‌ಗಳ ಅಭ್ಯರ್ಥಿಗಳೇ ಎನ್ನುವುದನ್ನು ಆಧರಿಸಿ ವಯೋಮಿತಿ ಸಡಿಲಿಸಲಾಗುತ್ತದೆ.

ಈ ಸಂಬಂಧ ಗಡಿಭದ್ರತಾ ಪಡೆ, ಕೇಂದ್ರೀಯ ಕರ್ತವ್ಯ ಕೇಡರ್ (ಗಜೆಟೆಡ್ ಅಲ್ಲದ ಹುದ್ದೆಗಳು) ನೇಮಕಾತಿ ನಿಯಮಾವಳಿ-2015ಕ್ಕೆ ಮಾರ್ಚ್ 9ರಿಂದ ಅನ್ವಯವಾಗುವಂತೆ ತಿದ್ದುಪಡಿ ತರಲಾಗಿದೆ. ಕಾನ್‌ಸ್ಟೇಬಲ್ ಹುದ್ದೆಗಳಿಗೆ ಸಂಬಂಧಿಸಿದ ಭಾಗವನ್ನು ತಿದ್ದುಪಡಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ. ಇದರ ಜತೆಗೆ ಮೊದಲ ಬ್ಯಾಚ್‌ನ ಅಗ್ನಿವೀರರಿಗೆ ಗರಿಷ್ಠ ವಯೋಮಿತಿಯನ್ನು 5 ವರ್ಷ ಸಡಿಸಲು ಮತ್ತು ಬಳಿಕದ ಬ್ಯಾಚ್‌ಗಳ ಅಗ್ನಿವೀರರಿಗೆ ಮೂರು ವರ್ಷಗಳ ಸಡಿಲಿಕೆಗೆ ಸಂಬಂಧಿಸಿದ ಟಿಪ್ಪಣಿಯನ್ನೂ ಸೇರಿಸಲಾಗಿದೆ.

ನಿಯಮಾವಳಿಗೆ ಸೇರಿಸಿದ ಮತ್ತೊಂದು ಟಿಪ್ಪಣಿಯ ಅನ್ವಯ, ಮಾಜಿ ಅಗ್ನಿವೀರರು ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಹಾಜರಾಗಬೇಕಿಲ್ಲ. ನಿಯಮಾವಳಿಗೆ ತಂದಿರುವ ಮತ್ತೊಂದು ತಿದ್ದುಪಡಿ ಅನ್ವಯ "ಮಾಜಿ ಅಗ್ನಿವೀರರಿಗೆ ಶೇಖಡ 10ರಷ್ಟು ಖಾಲಿ ಹುದ್ದೆಗಳನ್ನು ಮೀಸಲಿಡಲಾಗುತ್ತದೆ"

ಶೇಕಡ 25ರಷ್ಟು ಅಗ್ನಿವೀರರನ್ನು ನಾಲ್ಕು ವರ್ಷಗಳ ಸೇವಾವಧಿ ಮುಗಿದ ಬಳಿಕ ರಕ್ಷಣಾ ಪಡೆಗಳಿಗೆ ನಿಯೋಜಿಸಿಕೊಳ್ಳಲಾಗುತ್ತದೆ ಮತ್ತು ಉಳಿದ ಶೇಕಡ 75ರಷ್ಟು ಮಂದಿಯನ್ನು ವಾಪಾಸು ಕಳುಹಿಸಲಾಗುತ್ತದೆ ಎಂಬ ಬಗ್ಗೆ ಟೀಕೆಗಳು ವ್ಯಕ್ತವಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಗೃಹ ಸಚಿವಾಲಯ, ಕೇಂದ್ರೀಯ ಅರೆಮಿಲಿಟರಿ ಪಡೆಗಳು ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ಮಾಜಿ ಅಗ್ನಿವೀರರಿಗೆ ಶೇಕಡ 10ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿತ್ತು.

Similar News