ಕೆನಡಕ್ಕೆ ವಲಸೆ ಹೋಗುವ ಭಾರತೀಯ ಸಂಖ್ಯೆ ಕಳೆದ 10 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಳ‌

Update: 2023-03-10 15:46 GMT

ಹೊಸದಿಲ್ಲಿ,ಮಾ.10: ಕೆನಡಕ್ಕೆ ವಲಸೆ ಹೋಗುವ ಭಾರತೀಯರ ಸಂಖ್ಯೆಯು 2013ರಿಂದೀಚೆಗೆ ಮೂರು ಪಟ್ಟು ಹೆಚ್ಚಾಗಿರುವುದು ನೂತನ ದತ್ತಾಂಶಗಳಿಂದ ತಿಳಿದುಬಂದಿದೆ.

ಕೆನಡದ ಖಾಯಂ ನಿವಾಸಿಗಳಾದ ಭಾರತೀಯರ ಸಂಖ್ಯೆಯು 2013ರಲ್ಲಿ 32,828ರಷ್ಟಿದ್ದುದು 2022ರಲ್ಲಿ 1,18,095ಕ್ಕೇರಿದ್ದು, ಶೇ.260ರಷ್ಟು ಹೆಚ್ಚಳವಾಗಿದೆ.

 2013ರಿಂದೀಚೆಗೆ ಪ್ರತಿ ವರ್ಷವೂ ಈ ಸಂಖ್ಯೆಯಲ್ಲಿ ಸ್ಥಿರವಾದ ಏರಿಕೆ ಕಂಡುಬಂದಿರುವುದಾಗಿ ಕೆನಡಾ ಸರಕಾರ ಪ್ರಕಟಿಸಿರುವ ಅಂಕಿಅಂಶಳು ಸೂಚಿಸಿವೆ.

2015ರಲ್ಲಿ ಕೆನಡವು ವಿದೇಶದಲ್ಲಿನ ಅತ್ಯಂತ ಪರಿಣಿತ ಉದ್ಯೋಗಿಗಳಿಗೆ ಖಾಯಂ ವಾಸ್ತವ್ಯದ ಆಹ್ವಾನದ ಕೊಡುಗೆಯನ್ನು ನೀಡುವ ತ್ವರಿತ ಪ್ರವೇಶ ವ್ಯವಸ್ಧೆಯನ್ನು ಜಾರಿಗೆ ತಂದಿತ್ತು.

ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರ 2017ರಿಂದ 2021ರವರೆಗಿನ ಅಡಳಿತಾವಧಿಯಲ್ಲಿ ಕೆನಡಕ್ಕೆ ವಲಸೆ ಹೋಗುವ ಭಾರತೀಯರ ಸಂಖ್ಯೆಯಲ್ಲಿ ಗಣನೀಯ ಜಿಗಿತವುಂಟಾಗಿತ್ತು. ಟ್ರಂಪ್ ಅವರ ಪ್ರಬಲವಾದ ವಲಸಿಗ ವಿರೋಧಿ ನಿಲುವನ್ನು ಪ್ರತಿಪಾದಿಸುವ ಮೂಲಕ 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧಿಕಾರಕ್ಕೇರಿದ್ದರು. ಟ್ರಂಪ್ ಅವಧಿಯಲ್ಲಿ ಬಹುತೇಕ ಭಾರತೀಯರು ಅಮೆರಿಕದ ಬದಲಿಗೆ ಕೆನಡದ ಖಾಯಂ ನಿವಾಸಿಗಳಾಗಲು ಹೆಚ್ಚು ಒಲವು ತೋರಿಸಿದ್ದರು.

ಆದರೆ ಕೋವಿಡ್19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಅಂತಾರಾಷ್ಟ್ರೀಯ ಪ್ರವಾಸಕ್ಕೆ ನಿಬಂಧಗಳನ್ನು ವಿಧಿಸಿದ ಹಿನ್ನೆಲೆಯಲ್ಲಿ 2019ರಲ್ಲಿ ಕೆನಡಕ್ಕೆ ವಲಸೆ ಹೋಗುವ ಭಾರತೀಯರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯುಂಟಾಗಿತ್ತು.

Similar News