ಹೂಡೆ ಸಾಲಿಹಾತ್‌ನಲ್ಲಿ ಮಹಿಳಾ ದಿನಾಚರಣೆ
ಉಡುಪಿ, ಮಾ.10: ಹೂಡೆ ಸಾಲಿಹಾತ್ ಮಹಿಳಾ ಪ್ರಥಮ ದರ್ಜೆ ಕಾಲೇಜು, ಸಾಲಿಹಾತ್ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗೂ ಜಮಾಅತೇ ಇಸ್ಲಾಮೀ ಹಿಂದ್ ಮಹಿಳಾ ಘಟಕ ಹೂಡೆ ಆಶ್ರಯದಲ್ಲಿ ಅಂತಾ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬ್ರಹ್ಮಾವರ ಕುಂಬ್ರಗೋಡು ಸರಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕಿ, ರಾಜ್ಯ ಸಂಪನ್ಮೂಲ ವ್ಯಕ್ತಿ ವೀಣಾ ಇವರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿ ಅವರು, ಮಹಿಳೆಯರು ವೃತ್ತಿ ಪರತೆಯಲ್ಲಿ ಜಾಣ್ಮೆ ಹಾಗೂ ತಾಳ್ಮೆಯನ್ನು ಬಳಸಿಕೊಂಡಲ್ಲಿ ಯಶಸ್ಸಿನ ಮೆಟ್ಟಿಲು ಏರಲು ಸಾಧ್ಯ ಎಂದು ಹೇಳಿದರು.
ಸಾಲಿಹಾತ್ ಶಾಲೆಯ ಹಳೆ ವಿದ್ಯಾರ್ಥಿನಿ ಡಾ.ಮೆಹೆನಾಝ್ಫಜಲು ರೆಹಮಾನ್ ಇವರನ್ನು ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಇದ್ರಿಸ್ ಹೂಡೆ ವಹಿಸಿದ್ದರು.
ವೇದಿಕೆಯಲ್ಲಿ ಆಡಳಿತಾಧಿಕಾರಿ ಅಸ್ಲಂ ಹೈಕಾಡಿ, ಪ್ರಾಂಶುಪಾಲರಾದ ದಿವ್ಯಾ ಪೈ, ಕುಲ್ಸುಮ್ ಅಬೂಬಕರ್, ಹೂಡೆ ಜಮಾತೇ ಇಸ್ಲಾಮೀ ಹಿಂದ್ ಮಹಿಳಾ ಘಟಕದ ಅಧ್ಯಕ್ಷ ಜಮೀಲಾ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುನಂದಾ, ತಸ್ಮಿಯಾ ಮುಂತಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ರೀಹಾ ಶೇಖ್ ಸ್ವಾಗತಿಸಿದರು. ವಿದ್ಯಾರ್ಥಿನಿ ಆಯಿಷಾ ಅಝ್ವಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಆಯಿಷಾ ಸಫಾ ವಂದಿಸಿದರು.