×
Ad

ಜೆ.ಎನ್.ಯು ಭಾರತದ ಸಾಂಸ್ಕೃತಿಕ ಏಕತೆಯ ಜೀವಂತ ಪ್ರತಿಬಿಂಬವಾಗಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು

Update: 2023-03-10 21:49 IST

ಹೊಸದಿಲ್ಲಿ,ಮಾ.10: ಜವಾಹರಲಾಲ್ ನೆಹರು ವಿವಿ (ಜೆ.ಎನ್.ಯು)ಯು ತುಲನಾತ್ಮಕವಾಗಿ ಯುವ ಸಂಸ್ಥೆಯಾಗಿದೆ ಮತ್ತು ಭಾರತದ ಸಾಂಸ್ಕೃತಿಕ ಏಕತೆಯ ಜೀವಂತ ಪ್ರತಿಬಿಂಬವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ ಇಲ್ಲಿ ಹೇಳಿದರು.

ವಿವಿಯ ಆರನೇ ಘಟಿಕೋತ್ಸವದಲ್ಲಿ ಮಾತನಾಡಿದ ರಾಷ್ಟ್ರಪತಿಗಳು,ಈ ಬಾರಿ ಮಹಿಳಾ ಸಂಶೋಧನಾ ಸಾಧಕಿಯರ ಸಂಖ್ಯೆ ಪುರುಷರಿಗಿಂತ ಹೆಚ್ಚಾಗಿದೆ ಎಂದು ಬೆಟ್ಟು ಮಾಡಿದರು. ಇದು ಸಾಮಾಜಿಕ ಬದಲಾವಣೆಯ ಮಹತ್ವದ ಸೂಚಕವಾಗಿದೆ ಎಂದು ಅವರು ಬಣ್ಣಿಸಿದರು.

ಜೆಎನ್ಯು ತುಲನಾತ್ಮಕವಾಗಿ ಯುವ ವಿವಿಯಾಗಿದೆ. 1969ರಲ್ಲಿ ಮಹಾತ್ಮಾ ಗಾಂಧಿಯವರ ಜನ್ಮಶತಾಬ್ದಿ ಆಚರಣೆಯ ವರ್ಷದಲ್ಲಿ ಅದು ಆರಂಭಗೊಂಡಿದ್ದನ್ನು ಅರ್ಥಪೂರ್ಣ ಮತ್ತು ಐತಿಹಾಸಿಕ ಮಹತ್ವವನ್ನಾಗಿ ತಾನು ನೋಡುತ್ತೇನೆ ಎಂದು ಹೇಳಿದ ಅವರು, ವಿವಿಯು ಸುಂದರವಾದ ಅರಾವಳಿ ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಭಾರತದಾದ್ಯಂತದ ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ ಮತ್ತು ಕ್ಯಾಂಪಸ್ನಲ್ಲಿ ಒಟ್ಟಿಗೆ ವಾಸವಿದ್ದಾರೆ.

ಇದು ಭಾರತ ಮತ್ತು ವಿಶ್ವದ ಕುರಿತು ತಮ್ಮ ದೃಷ್ಟಿಕೋನವನ್ನು ವಿಸ್ತರಿಸಿಕೊಳ್ಳಲು ಅವರಿಗೆ ನೆರವಾಗುತ್ತದೆ. ವಿವಿಧತೆಗಳ ನಡುವೆ ಈ ವಿವಿಯು ಭಾರತದ ಸಾಂಸ್ಕೃತಿಕ ಏಕತೆಯ ಜೀವಂತ ಪ್ರತಿಬಿಂಬವನ್ನು ಮಂಡಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು,ಜೆಎನ್ಯು ದೇಶದ ಎಲ್ಲ ಭಾಗಗಳಿಂದಲೂ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಬರುವ ಬಹು ವೈವಿಧ್ಯದ ಸಂಸ್ಥೆಯಾಗಿದೆ ಎಂದು ಬಣ್ಣಿಸಿದರು.

ವಿವಿಯಲ್ಲಿ ಚರ್ಚೆಗಳ ಮಹತ್ವವನ್ನು ಒತ್ತಿ ಹೇಳಿದ ಅವರು,ಇದು ಸಂಶೋಧನಾ ವಿವಿಯಾಗಿದೆ. ಜೆಎನ್ಯುದಂತಹ ಬಹು ವೈವಿಧ್ಯಮಯ ಸಂಸ್ಥೆ ಭಾರತದಲ್ಲಿ ಬೇರೊಂದಿಲ್ಲ. ಭಾರತವು ಅತ್ಯಂತ ಹಳೆಯ ನಾಗರಿಕತೆಯಾಗಿದೆ ಮತ್ತು ಜೆಎನ್ಯು ಈ ನಾಗರಿಕತೆಯನ್ನು ಮುಂದಕ್ಕೊಯ್ಯುತ್ತಿದೆ ಎಂದರು.

ವಿವಿಯಲ್ಲಿನ ಶೇ.52ರಷ್ಟು ವಿದ್ಯಾರ್ಥಿಗಳು ಎಸ್ಸಿ,ಎಸ್ಟಿ ಮತ್ತು ಒಬಿಸಿ ಮೀಸಲು ವರ್ಗಗಳಿಗೆ ಸೇರಿದವರಾಗಿದ್ದಾರೆ ಎಂದು ಹೇಳಿದ ವಿವಿಯ ಕುಲಪತಿ ಶಾಂತಿಶ್ರೀ ಧೂಲಿಪುಡಿ ಪಂಡಿತ ಅವರು,‘ಇದು ನಮ್ಮ ಆರನೇ ಘಟಿಕೋತ್ಸವವಾಗಿದ್ದು,ಈ ಬಾರಿ ಒಟ್ಟು 948 ಸಂಶೋಧನಾ ವಿದ್ವಾಂಸರಿಗೆ ಪದವಿಗಳನ್ನು ಪ್ರದಾನಿಸಲಾಗಿದೆ ಎಂದು ತಿಳಿಸಿದರು.

Similar News