ಮಹಿಳಾ ಮೀಸಲಾತಿ ಮಸೂದೆ ಕುರಿತು ಬಿಜೆಪಿ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು: ಕಾಂಗ್ರೆಸ್

Update: 2023-03-10 16:26 GMT

ಹೊಸದಿಲ್ಲಿ,ಮಾ.10: ಮಹಿಳಾ ಮೀಸಲಾತಿ ಮಸೂದೆ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಶುಕ್ರವಾರ ಬಿಜೆಪಿಗೆ ಸೂಚಿಸಿರುವ ಕಾಂಗ್ರೆಸ್ ಮುಂಬರುವ ಸಂಸತ್ತಿನ ಬಜೆಟ್ ಅಧಿವೇಶನದ ದ್ವಿತೀಯ ಭಾಗದಲ್ಲಿ ಮಸೂದೆಯನ್ನು ಮಂಡಿಸುವಂತೆ ಆಗ್ರಹಿಸಿದೆ.

ಸುದೀರ್ಘ ಕಾಲದಿಂದ ಬಾಕಿಯುಳಿದಿರುವ ಮಸೂದೆಯನ್ನು ಮಾ.13ರಿಂದ ಆರಂಭಗೊಳ್ಳಲಿರುವ ಬಜೆಟ್ ಅಧಿವೇಶನದ ಎರಡನೇ ಭಾಗದಲ್ಲಿ ಅಂಗೀಕರಿಸುವಂತೆ ಆಗ್ರಹಿಸಿ ಬಿಆರ್‌ಎಸ್‌ ನಾಯಕಿ ಕೆ.ಕವಿತಾ ಅವರು ಕೈಗೊಂಡ ನಿರಶನ ಮುಷ್ಕರದ ನಡುವೆ ಕಾಂಗ್ರೆಸ್ ಈ ಹೇಳಿಕೆ ಹೊರಬಿದ್ದಿದೆ.

‘ಕಾಂಗ್ರೆಸ್ ನಾಯಕತ್ವದ ಪ್ರಯತ್ನಗಳಿಂದಾಗಿ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆಯು 2010,ಮಾ.9ರಂದು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿತ್ತು. ಆದರೆ ಲೋಕಸಭೆಯಲ್ಲಿ ಅದಕ್ಕೆ ಬೆಂಬಲ ಲಭಿಸಿರಲಿಲ್ಲ. ಮಸೂದೆಯು ಈಗಲೂ ಅಸ್ತಿತ್ವದಲ್ಲಿದ್ದು, ಬಾಕಿಯಾಗಿದೆ. ಅದನ್ನು ಪುನರುಜ್ಜೀವನಗೊಳಿಸುವುದನ್ನು ಯಾವುದು ತಡೆಯುತ್ತಿದೆ?’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ ರಮೇಶ ಟ್ವೀಟಿಸಿದ್ದಾರೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಸೂದೆ ಕುರಿತ ಪ್ರಶ್ನೆಗೆ ಉತ್ತರಿಸಿದ ಕಾಂಗ್ರಸ್ ನಾಯಕಿ ಅಲಕಾ ಲಾಂಬಾ ಅವರು,ರಾಜ್ಯಸಭೆಯಲ್ಲಿ ಮಸೂದೆಯು ಅಂಗೀಕಾರಗೊಂಡಿದ್ದಾಗ ಲೋಕಸಭೆಯಲ್ಲಿ ಕಾಂಗ್ರೆಸ್ ಬಹುಮತವನ್ನು ಹೊಂದಿರಲಿಲ್ಲ,ಅದು ಸಮ್ಮಿಶ್ರ ಸರಕಾರವಾಗಿತ್ತು ಎಂದು ಉತ್ತರಿಸಿದರು.

‘ಈಗ ಲೋಕಸಭೆಯಲ್ಲಿ ಬಿಎಜೆಪಿಯು ಬಹುಮತವನ್ನು ಹೊಂದಿದೆ,ತನ್ನ 2019ರ ಚುನಾವಣಾ ಪ್ರಣಾಳಿಕೆಯಲ್ಲಿ ಮತ್ತು ಅದಕ್ಕೂ ಮೊದಲೂ ಮಹಿಳೆಯರಿಗೆ ಶೇ.33 ಮೀಸಲಾತಿಯ ಭರವಸೆಯನ್ನು ಅದು ನೀಡಿತ್ತು. ಆದರೆ ಒಂಭತ್ತು ವರ್ಷಗಳ ಆಡಳಿತದ ಬಳಿಕ ಈಗಲೂ ಅದು ಈ ವಿಷಯದಲ್ಲಿ ವೌನವಾಗಿದೆ. ಬಿಜಪಿ ಸರಕಾರವು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಮತ್ತು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸುವ ಮೂಲಕ ಮಹಿಳೆಯರ ಹಕ್ಕುಗಳನ್ನು ಖಚಿತಪಡಿಸಬೇಕು ಎಂದು ನಾವು ಆಗ್ರಹಿಸುತ್ತೇವೆ ’ಎಂದರು.

Similar News