ತಾಂತ್ರಿ‘ಕತೆ’

Update: 2023-03-11 04:51 GMT

ಬಣ್ಣ ಬಣ್ಣ ಆ್ಯಪಲ್

ಟೆಕ್ ದೈತ್ಯ ಆ್ಯಪಲ್ ಸೆಪ್ಟಂಬರ್ 2022ರಲ್ಲಿ ಐಫೋನ್ 14 ಸರಣಿಯನ್ನು ಅನಾವರಣಗೊಳಿಸಿತು. ಐಫೋನ್ 14 ಶ್ರೇಣಿಯು ನಾಲ್ಕು ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ - ಐಫೋನ್ 14, ಐಫೋನ್ 14 ಪ್ಲಸ್, ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್. ಸರಣಿಯ ಮೂಲ ಮಾದರಿಗಳು, ವೆನಿಲ್ಲಾ ಐಫೋನ್ 14 ಮತ್ತು ಐಫೋನ್ 14 ಪ್ಲಸ್ ಐದು ವಿಭಿನ್ನ ಬಣ್ಣ - ನೀಲಿ, ನೇರಳೆ, ಮಿಡ್ನೈಟ್, ಸ್ಟಾರ್ಲೈಟ್ ಮತ್ತು ಕೆಂಪು ಬಣ್ಣಗಳಲ್ಲಿ ಲಭ್ಯವಿವೆ. ಕಂಪೆನಿಯು ಈಗ ಐಫೋನ್ 14 ಮತ್ತು ಐಫೋನ್ 14 ಪ್ಲಸ್ ಶ್ರೇಣಿಗೆ ವಿಭಿನ್ನ ಬಣ್ಣದ ಆಯ್ಕೆಯನ್ನು ಸೇರಿಸಲು ಯೋಜಿಸುತ್ತಿದೆ. 

ಐಫೋನ್ 14ಗಾಗಿ ಆ್ಯಪಲ್ ‘ಹೊಸ ಬಣ್ಣ’ ಯೋಜನೆ
ಕಳೆದ ಕೆಲವು ವರ್ಷಗಳಿಂದ, ಆ್ಯಪಲ್ ವಸಂತಕಾಲದಲ್ಲಿ ಐಫೋನ್‌ಗಳಿಗೆ ಹೊಸ ಬಣ್ಣಗಳನ್ನು ಸೇರಿಸುತ್ತಿದೆ. ಐಫೋನ್ ಮಾರಾಟವನ್ನು ಹೆಚ್ಚಿಸಲು ಇದು ಕಂಪೆನಿಗೆ ಸಹಾಯ ಮಾಡುತ್ತದೆ. ಮಾರ್ಚ್ 2022ರಲ್ಲಿ, ಕಂಪೆನಿಯು ಐಫೋನ್ 13 ಮತ್ತು ಐಫೋನ್ 13 ಮಿನಿಗಾಗಿ ಹಸಿರು ಬಣ್ಣಗಳನ್ನು ಆರಿಸಿತ್ತು. ಐಫೋನ್ 13 ಪ್ರೊ ಮಾದರಿಗಳಿಗೂ ಹಸಿರು ಬಣ್ಣ ಘೋಷಿಸಿತು. ಅದಕ್ಕೂ ಮೊದಲು, ಎಪ್ರಿಲ್ 2021ರಲ್ಲಿ, ಆ್ಯಪಲ್ ಐಫೋನ್ 12 ಮತ್ತು ಐಫೋನ್ 12 ಮಿನಿ ಗಾಗಿ ನೇರಳೆ ಬಣ್ಣವನ್ನು ಆಯ್ಕೆ ಮಾಡಲಾಗಿತ್ತು.

ಹಳದಿ ಬಣ್ಣದ ಐಫೋನ್‌ಗಳು
ಹಿಂದಿನ ಐಫೋನ್ ಮಾದರಿಗಳನ್ನು ಹಳದಿ ಬಣ್ಣದಲ್ಲಿ ತಂದಿದ್ದು, 2019ರಲ್ಲಿ ಐಫೋನ್ 11 ಮತ್ತು 2018ರಲ್ಲಿ ಐಫೋನ್ ಎಕ್ಸ್‌ಆರ್‌ಗಾಗಿ ಹಳದಿ ಬಣ್ಣದ ಆಯ್ಕೆ ಸೇರಿಸಲಾಗಿದೆ. ಆ್ಯಪಲ್ ಐಫೋನ್ 14 ಪ್ರೊ ಮಾದರಿಗಳಲ್ಲಿಯೂ ಮತ್ತೆ ಅದೇ ಬಣ್ಣ ಬರಲಿದೆಯೇ ಎಂಬ ಕುತೂಹಲವಿದೆ. ಅದು ಬಂದರೆ ಬಂಗಾರ ಬಣ್ಣವನ್ನು ಹೋಲುವ ಮಾದರಿಯಲ್ಲಿ ಆಯ್ಕೆ ಅವಕಾಶ ಸಿಗಲಿದೆ.

ಫೇಸ್‌ಬುಕ್‌ನಲ್ಲಿ ಫೋಟೊ ಎಡಿಟ್ ಮಾಡಬಹುದು

ಫೇಸ್‌ಬುಕ್ ನಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕ ಸಾಧಿಸಲು ನಮಗೆ ಸಹಾಯ ಮಾಡುತ್ತದೆ. ನಾವು ಸಂದೇಶಗಳನ್ನು ಪೋಸ್ಟ್ ಮಾಡಬಹುದು ಮತ್ತು ಫೇಸ್‌ಬುಕ್‌ನಲ್ಲಿ ಫೋಟೊಗಳು ಮತ್ತು ವೀಡಿಯೊಗಳನ್ನು ಸಹ ಹಂಚಿಕೊಳ್ಳಬಹುದು. ಆದರೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುವ ಫೋಟೊಗಳನ್ನು ಎಡಿಟ್ ಮಾಡುವ ಅವಕಾಶವನ್ನು ಫೇಸ್‌ಬುಕ್ ನೀಡುತ್ತಿರುವುದು ನಿಮಗೆ ಗೊತ್ತಿದೆಯಾ? ಹೌದು, ಕೆಲವು ಸರಳ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಫೋಟೊಗಳನ್ನು ಹಂಚಿಕೊಳ್ಳುವ ಮೊದಲು ನೀವು ಫೇಸ್‌ಬುಕ್‌ನಲ್ಲಿ ಈ ಸೌಲಭ್ಯ ಪಡೆದುಕೊಳ್ಳಬಹುದು.


ಫೇಸ್‌ಬುಕ್‌ನಲ್ಲಿ ಫೋಟೊ ಎಡಿಟ್ ಮಾಡುವುದು ಹೇಗೆ?

1. ನಿಮ್ಮ ಫೀಡ್‌ನ ಮೇಲ್ಭಾಗದಲ್ಲಿ, ಫೋಟೊ/ವೀಡಿಯೊ ಐಕಾನ್ ಮೇಲೆ ಕ್ಲಿಕ್ ಮಾಡಿ.
2. ಈಗ ನೀವು ಹಂಚಿಕೊಳ್ಳಲು ಬಯಸುವ ಫೋಟೊ ಆಯ್ಕೆಮಾಡಿ.
3. ನಂತರ ಫೋಟೋ ಮೇಲೆ ಪೆನ್ಸಿಲ್ ಐಕಾನ್ ಕ್ಲಿಕ್ ಮಾಡಿ, ನಂತರ ಎಡಿಟ್ ಆಲ್ ಕ್ಲಿಕ್ ಮಾಡಿ.
4.ಬಳಿಕ ಎಡಿಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
5. ಶೀರ್ಷಿಕೆಯನ್ನು ಸೇರಿಸಬಹುದು, ಸ್ನೇಹಿತರನ್ನು ಟ್ಯಾಗ್ ಮಾಡಬಹುದು, ಫೋಟೊವನ್ನು ಕ್ರಾಪ್ ಮಾಡಬಹುದು ಮತ್ತು ತಿರುಗಿಸಬಹುದು.
6. ಎಡಿಟ್ ಮಾಡಿದ ನಂತರ ಸೇವ್ ಆಯ್ಕೆ ಕ್ಲಿಕ್ ಮಾಡಬೇಕು.
7. ಅಂತಿಮವಾಗಿ ಪೋಸ್ಟ್ ಆಪ್ಷನ್ ಕ್ಲಿಕ್ ಮಾಡಿ.


ಕ್ರೋಮ್‌ನಲ್ಲಿಏನಿದು ಆಟೋಮೆಟಿಕ್ ಡಿಲೀಟ್ ಆಪ್ಷನ್?

ಗೂಗಲ್ ಕ್ರೋಮ್ ಆಟೋಫಿಲ್ ಫೀಚರ್, ಬಳಕೆದಾರರಿಗೆ ಅನುಕೂಲಕರವಾಗಿದೆ. ಇದು ವಿಳಾಸ, ಕಾರ್ಡ್ ವಿವರಗಳು ಮತ್ತು ಆಯಾ ಕ್ಷೇತ್ರಗಳಲ್ಲಿ ಪಾಸ್‌ವರ್ಡ್‌ಗಳಂತಹ ವಿವರಗಳನ್ನು ಸ್ವಯಂಚಾಲಿತವಾಗಿ ಭರ್ತಿ ಮಾಡುತ್ತದೆ. ನವೀಕರಿಸಿದ ಡೇಟಾವನ್ನು ಹೊಂದಿಲ್ಲದಿರುವಾಗ ಅಥವಾ ಡೇಟಾವು ಸಂಪೂರ್ಣವಾಗಿ ಅಗತ್ಯವಿಲ್ಲದಿದ್ದಾಗ ಕಿರಿಕಿರಿಯನ್ನು ಉಂಟುಮಾಡುತ್ತದೆ. ಈಗ 9to5Google  ಆಟೋಫಿಲ್ ಡಿಲೀಟ್ ಫೀಚರ್ ಕೆಲವು ಬದಲಾವಣೆ ಮಾಡಲು ಯೋಜಿಸುತ್ತಿದೆ. ಅದು ಬಳಕೆದಾರರಿಗೆ ಆಟೋಫಿಲ್ ಡೇಟಾ ಡಿಲೀಟ್ ಆಯ್ಕೆಯನ್ನು ಸುಲಭವಾಗಿಸಲಿದೆ.
ಗೂಗಲ್ ಈಗಾಗಲೇ ಇತ್ತೀಚಿನ ಕ್ರೋಮ್ ಕ್ಯಾನರಿ ಬಿಲ್ಡ್‌ನಲ್ಲಿ ಈ ವೈಶಿಷ್ಟ್ಯವನ್ನು ಪರೀಕ್ಷಿಸಲು ಶುರುಮಾಡಿದೆ. ಆಟೋಫಿಲ್ ಡೇಟಾಕ್ಕಾಗಿ ಹೊಸದಾಗಿ ಸುಲಭ ಅಳಿಸುವಿಕೆ ಫೀಚರ್ ಲಭ್ಯವಿದೆ. ಫ್ಲ್ಯಾಗ್ ಮೆನುಗೆ ಹೋಗಿ ‘ಸ್ವಯಂಪೂರ್ಣ ನಮೂದುಗಳಿಗಾಗಿ ಡಿಲೀಟ್ ಬಟನ್’ ಒತ್ತುವ ಮೂಲಕ ಬಳಕೆದಾರರು ಅದನ್ನು ಸಕ್ರಿಯಗೊಳಿಸಬಹುದು.
ವಿಂಡೋಸ್, ಮ್ಯಾಕೋಸ್, ಲಿನಕ್ಸ್ ಮತ್ತು ಕ್ರೋಮ್ ಒಎಸ್ ಸೇರಿದಂತೆ ಡೆಸ್ಕ್‌ಟಾಪ್ ಪ್ಲಾಟ್‌ಫಾರ್ಮ್‌ಗಳಿಗಾಗಿಯೂ ಹೊಸ ಡಿಲೀಟ್ ಬಟನ್ ಸದ್ಯ ಅಭಿವೃದ್ಧಿಯಲ್ಲಿದೆ. ಡೌನ್‌ಲೋಡ್ ಮಾಡಿ ಸಿಸ್ಟಮ್‌ನಲ್ಲಿ ಇನ್ಸ್ಟಾಲ್ ಮಾಡಬಹುದು.
ಪ್ರತಿಬಾರಿಯೂ ಹೊಸ ಡೇಟಾ ಭರ್ತಿಮಾಡುವಾಗ ಈ ಡಿಲೀಟ್ ಆಯ್ಕೆ ಬಳಸಬಹುದು.

ವಿಜ್ಞಾನ-ವಿಸ್ಮಯ

ಗೂಬೆಗಳಿಗೆ ಕಣ್ಣುಗುಡ್ಡೆಗಳಿಲ್ಲ

ಗೂಬೆಗಳು ಕಣ್ಣುಗುಡ್ಡೆಗಳನ್ನು ಹೊಂದಿಲ್ಲ. ಬದಲಿಗೆ ಕಣ್ಣಿನ ಕೊಳವೆಗಳನ್ನು ಹೊಂದಿವೆ. ಆ ಟ್ಯೂಬ್‌ಗಳು ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸಲು ಸಾಧ್ಯವಾಗದ ಕಾರಣ, ಗೂಬೆಗಳು ತಮ್ಮ ಸುತ್ತಲಿನ ಪ್ರಪಂಚವನ್ನು ನೋಡಲು ಕುತ್ತಿಗೆಯನ್ನು ಬಳಸುತ್ತವೆ. ಅವು ತಮ್ಮ ತಲೆಯನ್ನು 270 ಡಿಗ್ರಿಗಳಷ್ಟು ತಿರುಗಿಸಬಲ್ಲವು. ಮನುಷ್ಯರು 180 ಡಿಗ್ರಿವರೆಗೆ ಮಾತ್ರ ತಿರುಗಿಸಬಹುದು. ಗೂಬೆಗಳು ತಮ್ಮ ತಲೆಯ ಕೆಳಗೆ ಚಲಿಸುವ ನಾಳಗಳಿಗೆ ಹಾನಿಯಾಗದಂತೆ ಕುತ್ತಿಗೆಯನ್ನು 270 ಡಿಗ್ರಿಗಳವರೆಗೆ ಎರಡೂ ದಿಕ್ಕಿನಲ್ಲಿ ತಿರುಗಿಸಬಲ್ಲವು. ಹೀಗೆ ತಿರುಗಿಸುವಾಗ ಮೆದುಳಿಗೆ ರಕ್ತ ಪೂರೈಕೆ ಕಡಿತವಾಗದಿರುವಂತೆ  ವಿಶಿಷ್ಟ ರಕ್ತನಾಳದ ವ್ಯವಸ್ಥೆಯನ್ನು ಅವು ಹೊಂದಿವೆ.
 

ಕೆಫೀನ್ ನೈಸರ್ಗಿಕ ಕೀಟನಾಶಕ!

ಚಹಾ ಎಲೆಗಳು, ಗೌರಾನಾ ಹಣ್ಣುಗಳು, ಕೋಲಾ ಬೀಜಗಳು ಮತ್ತು ಕಾಫಿ ಬೀಜಗಳಲ್ಲಿ ಕಂಡುಬರುವ ಕೆಫೀನ್ - ನೈಸರ್ಗಿಕ ಕೀಟನಾಶಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಕೆಫೀನ್ ಹೊಂದಿರುವ ಸಸ್ಯಗಳನ್ನು ತಿನ್ನಲು ಪ್ರಯತ್ನಿಸುವ ಕೀಟಗಳ ನರಮಂಡಲವನ್ನು ಅತಿಯಾಗಿ ಸೇರಿ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ ಮತ್ತು ಹೆಚ್ಚು ಹಾನಿ ಮಾಡುವ ಮೊದಲು ಅವುಗಳನ್ನು ಕೊಲ್ಲುತ್ತದೆ. ಇದು ಮಾನವರ ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಮನುಷ್ಯರಲ್ಲಿ ಇದು ಕೇವಲ ಉತ್ತೇಜಕವಾಗಿ ಕಾರ್ಯನಿರ್ವಹಿಸುತ್ತದೆ.
 

ಕಣ್ಣು ಮಿಟುಕಿಸುವುದು!

ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೆಚ್ಚು ಬಾರಿ ಕಣ್ಣು ಮಿಟುಕಿಸುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಕಣ್ಣು ಮಿಟುಕಿಸುವುದು ಮಾನವ ದೇಹದ ಅಗತ್ಯ ಚಟುವಟಿಕೆ. ಆದರೆ ಆ ಕ್ರಿಯೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಫಂಕ್ಷನಲ್ ಅನ್ಯಾಟಮಿ ರಿಸರ್ಚ್ ಸೆಂಟರ್‌ನ ಅಧ್ಯಯನದ ಪ್ರಕಾರ, ಮಹಿಳೆಯರು ನಿಮಿಷಕ್ಕೆ 19ರಿಂದ 20 ಬಾರಿ ಕಣ್ಣು ಮಿಟುಕಿಸುತ್ತಾರೆ. ಪುರುಷರು ಇದೇ ಸಮಯದಲ್ಲಿ 10ರಿಂದ 11 ಬಾರಿ ಕಣ್ಣು ಮಿಟುಕಿಸಬಲ್ಲರು ಎಂದು ಅಧ್ಯಯನ ಹೇಳುತ್ತದೆ.

Similar News