ಸತೀಶ್ ಕೌಶಿಕ್ ಸಾವು ಪ್ರಕರಣ: ಫಾರ್ಮ್ ಹೌಸ್‌ನಲ್ಲಿ 'ಆಕ್ಷೇಪಾರ್ಹ ಔಷಧಿ'ಗಳು ಪತ್ತೆ
ಹೊಸದಿಲ್ಲಿ: ಇತ್ತೀಚೆಗೆ ನಿಧನರಾದ ಬಾಲಿವುಡ್ ನಟ ಹಾಗೂ ನಿರ್ದೇಶಕ ಸತೀಶ್ ಕೌಶಿಕ್ (Satish Kaushik) ಅವರು ಹೋಳಿ ಆಚರಣೆ ನಂತರ ಅನಾರೋಗ್ಯಕ್ಕೀಡಾದ ಬಿಜ್‌ವಾಸನ್ ಎಂಬಲ್ಲಿನ ಫಾರ್ಮ್ ಹೌಸ್‌ನಲ್ಲಿ ಆಕ್ಷೇಪಾರ್ಹ ಔಷಧಿಯ ಪ್ಯಾಕೆಟ್‌ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕೌಶಿಕ್ ಅವರು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತರಾಗಿದ್ದರು. ಈ ಫಾರ್ಮ್ ಹೌಸ್ ಕೌಶಿಕ್ ಅವರ ಸ್ನೇಹಿತ ವಿಕಾಸ್ ಮಲು ಅವರಿಗೆ ಸೇರಿತ್ತು.
ಈ ಔಷಧಿ ಯಾರಿಗಾಗಿ ತರಲಾಗಿತ್ತು ಎಂಬ ಕುರಿತು ತನಿಖೆ ನಡೆಯುತ್ತಿದೆ. ಫಾರ್ಮ್ ಹೌಸ್ ಮಾಲಕ ವಿಕಾಸ್ ಮಲು ವಿರುದ್ಧ ಬಹಳ ವರ್ಷಗಳ ಹಿಂದೆ ಅತ್ಯಾಚಾರ ಪ್ರಕರಣ ದಾಖಲಾಗಿತ್ತು ಎಂಬುದೂ ತಿಳಿದು ಬಂದಿದೆ. ಈ ಪ್ರಕರಣ ಎಲ್ಲಿ, ಯಾವಾಗ ದಾಖಲಾಗಿತ್ತು ಎಂಬುದನ್ನು ಕಂಡುಕೊಳ್ಳಲು ಪೊಲೀಸರು ಯತ್ನಿಸುತ್ತಿದ್ದಾರೆ.
ಹೋಳಿ ಆಚರಣೆಗಾಗಿ ಫಾರ್ಮ್ ಹೌಸ್‌ಗೆ ಬಂದಿದ್ದ 10 ರಿಂದ 12 ಜನರ ಪಟ್ಟಿಯನ್ನೂ ಪೊಲೀಸರು ಸಿದ್ಧಪಡಿಸಿದ್ದಾರೆ. ಇಲ್ಲಿಯ ತನಕ ಕೌಶಿಕ್ ಸಾವಿನ ಕಾರಣ ಕುರಿತು ಯಾವುದೇ ಸಂದೇಹ ವ್ಯಕ್ತವಾಗಿಲ್ಲ ಹಾಗೂ ವೈದ್ಯರು ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ತಿಳಿಸಿದ್ದರು. ಇನ್ನಷ್ಟು ತನಿಖೆಗಾಗಿ ಅವರ ವಿಸೆರಾ ಸ್ಯಾಂಪಲ್ ಅನ್ನೂ ಸಂಗ್ರಹಿಸಲಾಗಿದೆ.
ಕೌಶಿಕ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದವರೂ ಪೊಲೀಸರ ಸಂಪರ್ಕದಲ್ಲಿದ್ದಾರೆ. ಪ್ರಕರಣವನ್ನು ಎಲ್ಲಾ ಆಯಾಮಗಳಿಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಗರ್ಭಿಣಿ ಸೊಸೆಗೆ ಈಡಿ ಅಧಿಕಾರಿಗಳಿಂದ ಕಿರುಕುಳ: ಲಾಲೂ ಪ್ರಸಾದ್ ಯಾದವ್ ಆರೋಪ