ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 17,000 ರನ್ ಪೂರೈಸಿದ ರೋಹಿತ್ ಶರ್ಮಾ

ಈ ಸಾಧನೆ ಮಾಡಿರುವ 6ನೇ ಭಾರತೀಯ ಬ್ಯಾಟರ್

Update: 2023-03-11 13:30 GMT

ಅಹಮದಾಬಾದ್, ಮಾ.11: ಭಾರತದ ನಾಯಕ ರೋಹಿತ್ ಶರ್ಮಾ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 17,000 ರನ್ ಗಳಿಸಿರುವ ಭಾರತದ ಬ್ಯಾಟರ್‌ಗಳ ಪಟ್ಟಿಗೆ ಸೇರ್ಪಡೆಯಾದರು.

ಆಸ್ಟ್ರೇಲಿಯ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತದ ಮೊದಲ ಇನಿಂಗ್ಸ್‌ನಲ್ಲಿ 35 ರನ್ ಗಳಿಸಿದ ರೋಹಿತ್ ಈ ಸಾಧನೆ ಮಾಡಿದರು. ಈ ಮೈಲಿಗಲ್ಲನ್ನು ತಲುಪಿದ ಭಾರತದ ಆರನೇ ಬ್ಯಾಟರ್ ಎನಿಸಿಕೊಂಡರು.

2ನೇ ದಿನದಾಟದಂತ್ಯಕ್ಕೆ ಔಟಾಗದೆ 17 ರನ್ ಗಳಿಸಿದ್ದ ರೋಹಿತ್ 3ನೇ ದಿನವಾದ ಶನಿವಾರ ಬ್ಯಾಟಿಂಗ್ ಮುಂದುವರಿಸಿದರು. ಬೆಳಗ್ಗಿನ ಅವಧಿಯಲ್ಲಿ ಇನ್ನೂ 4 ರನ್ ಗಳಿಸಿದ ನಂತರ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 17 ಸಾವಿರ ರನ್ ಪೂರೈಸಿದರು.

ಕೊಹ್ಲಿ ಅವರು ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 17 ಸಾವಿರಕ್ಕೂ ಹೆಚ್ಚು ರನ್ ಗಳಿಸಿರುವ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್, ಸೌರವ್ ಗಂಗುಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರನ್ನೊಳಗೊಂಡ ಪಟ್ಟಿಯನ್ನು ಸೇರಿಕೊಂಡರು. 2007ರ ಜೂನ್‌ನಲ್ಲಿ ಐರ್‌ಲ್ಯಾಂಡ್ ವಿರುದ್ಧ ಭಾರತ ತಂಡಕ್ಕೆ ರೋಹಿತ್ ಪಾದಾರ್ಪಣೆಗೈದರು.

ಆ ನಂತರ ಅವರು ಈಗ ನಡೆಯುತ್ತಿರುವ ಅಹಮದಾಬಾದ್ ಟೆಸ್ಟ್ ಸಹಿತ ಒಟ್ಟು 48 ಟೆಸ್ಟ್, 241 ಏಕದಿನ ಹಾಗೂ 148 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಕ್ರಮವಾಗಿ 3,348, 9,782 ಹಾಗೂ 3,853 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕಗಳನ್ನು ಸಿಡಿಸಿರುವ ಏಕೈಕ ಆಟಗಾರನೆಂದ ದಾಖಲೆ ರೋಹಿತ್ ಹೆಸರಲ್ಲಿದೆ.
 

Similar News