×
Ad

ರಾಜಸ್ಥಾನ: ಕಾಂಗ್ರೆಸ್-ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾದ ಪುಲ್ವಾಮಾ ಹುತಾತ್ಮರ ವಿಧವೆ ಪತ್ನಿಯರ ಪ್ರತಿಭಟನೆ

Update: 2023-03-11 18:19 IST

ಜೈಪುರ್:‌ ಪುಲ್ವಾಮ (Pulwama) ಉಗ್ರ ದಾಳಿಯಲ್ಲಿ ಹತರಾದ ಸೈನಿಕರ ವಿಧವೆಯರು  ತಮ್ಮ ಕುಟುಂಬಗಳ ಸದಸ್ಯರಿಗೆ ಉದ್ಯೋಗ ಮತ್ತಿರ ಬೇಡಿಕೆಗಳನ್ನು ಮುಂದಿರಿಸಿ ನಡೆಸುತ್ತಿರುವ ಪ್ರತಿಭಟನೆಗಳು ರಾಜಸ್ಥಾನದಲ್ಲಿ ಬಿಜೆಪಿ (BJP) ಮತ್ತು ಆಡಳಿತ ಕಾಂಗ್ರೆಸ್‌ (Congress) ನಡುವೆ ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ದಾರಿ ಮಾಡಿಕೊಟ್ಟಿದೆ.

ಶುಕ್ರವಾರ‌ ರಾಜ್ಯದ ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ನಿವಾಸದೆದುರು ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರನ್ನು ಪೊಲೀಸರು ಸ್ಥಳದಿಂದ ತೆರವುಗಳಿಸಿ ಅವರ ನಿವಾಸದ ಪಕ್ಕದ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದ್ದರು.

ಈ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಕಿರೋಡಿ ಲಾಲ್‌ ಮೀನಾ ಅವರನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದರೆ ಇಂದು ಬಿಜೆಪಿ ಕಾರ್ಯಕರ್ತರು ಜೈಪುರದಲ್ಲಿ ಪ್ರತಿಭಟನೆ ನಡೆಸಿದ್ದರು.

ಇದಕ್ಕೆ ತಿರುಗೇಟು ನೀಡಿದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ಬಿಜೆಪಿ ವಿರುದ್ಧ ಆರೋಪ ಹೊರಿಸಿ, ಕಿರೋಡಿ ಲಾಲ್‌ ಅವರು ವಿಧವೆಯರನ್ನು ರಾಜಕೀಯ ಲಾಭಕ್ಕಾಗಿ ಬಳಸುತ್ತಿದ್ದಾರೆ ಎಂದು ದೂರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಿರೋಡಿ ಲಾಲ್, ಪೊಲೀಸರು ತನ್ನನ್ನು ಕೊಲ್ಲಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ವಿವಿಧ ಕಾರ್ಯಾಚರಣೆಗಳಲ್ಲಿ ಮೃತಪಟ್ಟ ಸೈನಿಕರ ವಿಧವೆಯರನ್ನು ಮುಖ್ಯಮಂತ್ರಿ ಗೆಹ್ಲೋಟ್‌ ಭೇಟಿಯಾಗಿ ಅವರ ಅಹವಾಲುಗಳನ್ನು ಆಲಿಸಿದ್ದರು ಆದರೆ ಪುಲ್ವಾಮ ದಾಳಿಯ ಸಂತ್ರಸ್ತರ ವಿಧವೆಯರನ್ನು ಮುಖ್ಯಮಂತ್ರಿ ಭೇಟಿಯಾಗದೇ ಇರುವ ಬಗ್ಗೆ ಬಿಜೆಪಿ ಟೀಕಿಸಿ ಇದು ಅವರಿಗೆ ಮಾಡಿದ ಅವಮಾನ ಎಂದಿದ್ದಾರೆ.

ಫೆಬ್ರವರಿ 28 ರಿಂದ ಪ್ರತಿಭಟಿಸುತ್ತಿರುವ ಪುಲ್ವಾಮ ಸಂತ್ರಸ್ತರ ವಿಧವೆಯರು ತಮ್ಮ ಮಕ್ಕಳಿಗೆ ಮಾತ್ರವಲ್ಲ ಸಂಬಂಧಿಗಳಿಗೂ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ಕೊಡಿಸಬೇಕು ಎಂದಿದ್ದಾರೆ. ರಸ್ತೆಗಳ ನಿರ್ಮಾಣ ಹಾಗೂ ತಮ್ಮ ಗ್ರಾಮದಲ್ಲಿ ಹುತಾತ್ಮರ ಪ್ರತಿಮೆಗಳನ್ನು ನಿರ್ಮಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

Similar News