ಸಿಲಿಕಾನ್ ವ್ಯಾಲಿ ಬ್ಯಾಂಕ್ ದಿವಾಳಿ: 2008 ರ ಬಳಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಹುದೊಡ್ಡ ಹಿಂಜರಿತ

Update: 2023-03-11 13:42 GMT

ಕ್ಯಾಲಿಫೋರ್ನಿಯಾ: ಕೆಲವು ಬಹುದೊಡ್ಡ ನವೋದ್ಯಮಗಳಿಗೆ ಸಾಲ ನೀಡುವಲ್ಲಿ ಮುಂಚೂಣಿಯಲ್ಲಿದ್ದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಶುಕ್ರವಾರ ದಿವಾಳಿಯಾಗಿದ್ದು, ಅದರಲ್ಲಿನ ಹೂಡಿಕೆದಾರರು ಹಾಗೂ ಠೇವಣಿದಾರರಲ್ಲಿ ತಲ್ಲಣ ಸೃಷ್ಟಿಸಿದೆ. ಇದರೊಂದಿಗೆ ಬ್ಯಾಂಕ್‌ನ ಶೇರು ಮೌಲ್ಯವೂ ಪತನಗೊಂಡು ಜಾಗತಿಕ ಶೇರು ಮಾರುಕಟ್ಟೆಗಳೂ ಹಿಂಜರಿತ ಅನುಭವಿಸಿದವು ಎಂದು ndtv.com ವರದಿ ಮಾಡಿದೆ.

ಶುಕ್ರವಾರ ಕ್ಯಾಲಿಫೋರ್ನಿಯಾ ಬ್ಯಾಂಕಿಂಗ್ ನಿಯಂತ್ರಕರು ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನ್ನು ಸ್ಥಗಿತಗೊಳಿಸಿದರು. 2008ರ ಜಾಗತಿಕ ಆರ್ಥಿಕ ಹಿಂಜರಿಕೆಯ ನಂತರ ಇದು ಬಹುದೊಡ್ಡ ಚಿಲ್ಲರೆ ಬ್ಯಾಂಕಿಂಗ್ ವೈಫಲ್ಯವಾಗಿದೆ.

ಜಾಗತಿಕ ಆರ್ಥಿಕ ಹಿಂಜರಿತದ ನಂತರದ ಬಹುದೊಡ್ಡ ಚಿಲ್ಲರೆ ಬ್ಯಾಂಕಿಂಗ್ ವೈಫಲ್ಯಕ್ಕೆ ಕಾರಣವಾಗಿರುವ ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನ್ನು ಶುಕ್ರವಾರ ಸ್ಥಗಿತಗೊಳಿಸಿದ ಅಮೆರಿಕಾ ನಿಯಂತ್ರಕರು, ಅದರಲ್ಲಿನ ಠೇವಣಿಗಳನ್ನು ನಿಯಂತ್ರಣಕ್ಕೆ ಪಡೆದರು.

ಕೆಲವು ನಿರ್ದಿಷ್ಟ ಗ್ರಾಹಕರು ತಮ್ಮ ದೊಡ್ಡ ಮೊತ್ತದ ಠೇವಣಿಗಳನ್ನು ಹಿಂಪಡೆದಿದ್ದರಿಂದಾಗಿ ಬಹುದೊಡ್ಡ ತಂತ್ರಜ್ಞಾನ ನವೋದ್ಯಮಗಳಿಗೆ ಸಾಲ ಒದಗಿಸುತ್ತಿದ್ದ ಈ ಬ್ಯಾಂಕಿನ ಶೇರು ಮೌಲ್ಯವು ಕೇವಲ 48 ಗಂಟೆಗಳಲ್ಲಿ ನಾಟಕೀಯ ಪತನ ಕಂಡಿತ್ತು.

ನವೋದ್ಯಮಗಳಲ್ಲಿ ಹೂಡಿಕೆ ಮಾಡುವ ಮೂಲಕ ಭಾರಿ ಲಾಭ ಗಳಿಸಿದ್ದ ಸಿಲಿಕಾನ್ ವ್ಯಾಲಿ ಬ್ಯಾಂಕ್, ತನ್ನ ಬಹುತೇಕ ಹೂಡಿಕೆಯನ್ನು ಅಮೆರಿಕಾ ಬಾಂಡ್‌ಗಳಲ್ಲಿ ಮಾಡಿತ್ತು. ಆದರೆ, ಹಣದುಬ್ಬರ ದರವನ್ನು ತಗ್ಗಿಸಲು ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿ ದರ ಏರಿಕೆ ಮಾಡಿದ್ದರಿಂದಾಗಿ ಬಾಂಡ್ ಮೌಲ್ಯವು ಕುಗ್ಗಿತ್ತು.

ಕೋವಿಡ್ ಸಾಂಕ್ರಾಮಿಕದ ನಂತರ ನವೋದ್ಯಮಗಳಲ್ಲಿನ ಹೂಡಿಕೆಯೂ ನಷ್ಟ ಅನುಭವಿಸಿದ್ದರಿಂದಾಗಿ, ದೊಡ್ಡ ಸಂಖ್ಯೆಯ ಗ್ರಾಹಕರು ಬ್ಯಾಂಕಿನಿಂದ ತಮ್ಮ ಠೇವಣಿಗಳನ್ನು ಹಿಂಪಡೆದಿದ್ದರು. ಇದರಿಂದ ಒತ್ತಡಕ್ಕೆ ಒಳಗಾದ ಬ್ಯಾಂಕ್, ಗ್ರಾಹಕರ ಹಣವನ್ನು ಮರಳಿಸಲು ತಮ್ಮ ಶೇರುಗಳ ಮೌಲ್ಯ ಕಡಿಮೆ ಇರುವಾಗ ತಮ್ಮ ಹೂಡಿಕೆಯನ್ನು ಮಾರಾಟ ಮಾಡಬೇಕಾಯಿತು.

ಈ ವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದ ಬ್ಯಾಂಕ್, ತಾನು ಈವರೆಗೆ ಎರಡು ಶತಕೋಟಿ ಡಾಲರ್ ನಷ್ಟ ಅನುಭವಿಸಿದ್ದೇನೆ ಎಂದು ಹೇಳಿತ್ತು. ಬ್ಯಾಂಕ್‌ನ ಸ್ಥಗಿತದ ನಂತರ ಬ್ಯಾಂಕ್ ಗ್ರಾಹಕರ ಸುಮಾರು 175 ಶತಕೋಟಿ ಡಾಲರ್ ಮೊತ್ತ ಫೆಡರಲ್ ಡೆಪಾಸಿಟ್ ಇನ್ಷೂರೆನ್ಸ್ ಕಾರ್ಪೊರೇಷನ್ ನಿಯಂತ್ರಣದಲ್ಲಿದೆ.

ಫೆಡರಲ್ ಡೆಪಾಸಿಟ್ ಇನ್ಷೂರೆನ್ಸ್ ಕಾರ್ಪೊರೇಷನ್ ಇದೀಗ ನೂತನ ನ್ಯಾಷನಲ್ ಬ್ಯಾಂಕ್ ಆಫ್ ಸಾಂತಾ ಕ್ಲಾರಾ ಅನ್ನು ಪ್ರಾರಂಭಿಸಿದ್ದು, ಸಿಲಿಕಾನ್ ವ್ಯಾಲಿ ಬ್ಯಾಂಕಿನ ಸ್ವತ್ತಿನ ಹಿಡಿತವನ್ನು ಈ ಬ್ಯಾಂಕ್ ಹೊಂದಲಿದೆ. ಈ ನಡುವೆ, ನ್ಯಾಷನಲ್ ಡೆಪಾಸಿಟ್ ಇನ್ಷೂರೆನ್ಸ್ ಕಾರ್ಪೊರೇಷನ್, ಗ್ರಾಹಕರು ತಮ್ಮ ವಿಮೆ ಹೊಂದಿರುವ ಠೇವಣಿಗಳಿಗೆ ಮುಕ್ತ ಪ್ರವೇಶ ಹೊಂದಿದ್ದು, ಬ್ಯಾಂಕಿನ ಎಲ್ಲ ಶಾಖೆಗಳು ಸೋಮವಾರ ತೆರೆದಿರುತ್ತವೆ. ಹಳೆಯ ಬ್ಯಾಂಕಿನ ಚೆಕ್‌ಗಳನ್ನೂ ಮಾನ್ಯ ಮಾಡಲಾಗುವುದು ಎಂದು ಠೇವಣಿದಾರರಿಗೆ ಅಭಯ ನೀಡಿದೆ.

ಸಿಲಿಕಾನ್ ವ್ಯಾಲಿ ಬ್ಯಾಂಕಿನ ಡಿಢೀರ್ ಪತನವು ಸಿಲಿಕಾನ್ ವ್ಯಾಲಿಯ ಅಸಂಖ್ಯಾತ ಉದ್ಯಮಿಗಳನ್ನು ನಡು ನೀರಿನಲ್ಲಿ ಮುಳುಗಿಸಿದೆ ಮತ್ತು ಚಿಂತಾಕ್ರಾಂತವಾಗಿಸಿದೆ. ಈ ಮಧ್ಯೆ, ವಾಷಿಂಗ್ಟನ್‌ನಲ್ಲಿ ಬೈಡನ್ ಆಡಳಿತ ಯಂತ್ರದ ಅಧಿಕಾರಿಗಳು ನಿಯಂತ್ರಣ ಪ್ರಾಧಿಕಾರಗಳ ಬಗ್ಗೆ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದು, ರಾಜಕಾರಣಿಗಳೂ ಕೂಡಾ ಅವರ ಬೆಂಬಲಕ್ಕೆ ನಿಂತಿದ್ದಾರೆ.

Similar News