ಮಣಿಪಾಲ: ಕಲಾವಿದೆ ಮಾನಸಿ ಸುಧೀರ್‌ಗೆ ಸನ್ಮಾನ

Update: 2023-03-11 13:46 GMT

ಮಣಿಪಾಲ, ಮಾ.11: ‘ಕಾಂತಾರ’ ಖ್ಯಾತಿಯ ಚಲನಚಿತ್ರ ನಟಿ, ಪ್ರಸಿದ್ಧ ಭರತನಾಟ್ಯ ಕಲಾವಿದೆ ಮತ್ತು ಗಾಯಕಿ ಮಾನಸಿ ಸುಧೀರ್  ಅವರನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಾಹೆಯ  ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ವತಿಯಿಂದ ಸನ್ಮಾನಿಸಲಾಯಿತು.

14 ಚಲನಚಿತ್ರಗಳಲ್ಲಿ ನಟಿಸಿರುವ ಮಾನಸಿ ಸುಧೀರ್ ಅವರ ವಿಶಿಷ್ಟ ಪಾತ್ರ ನಿರ್ವಹಣೆ ‘ಕಾಂತಾರ’ದಲ್ಲಿ  ಜನಮೆಚ್ಚುಗೆ ಗಳಿಸಿದೆ. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಕಲಾವಿದೆ, ನಾವು ಮಾಡುವ ಕೆಲಸವನ್ನು ಆನಂದಿಸಬೇಕು, ಯಶಸ್ಸಿಗಾಗಿ ಕಷ್ಟಪಡಬೇಕು ಎಂದರು.

ಜಿಸಿಪಿಎಎಸ್ ಮುಖ್ಯಸ್ಥ ವರದೇಶ್ ಹಿರೇಗಂಗೆ ಮಾತನಾಡಿ, ಕಲಾವಿದೆ ಮಾನಸಿ ಕಷ್ಟಪಟ್ಟು ಯಶಸ್ಸಿನ ಮೆಟ್ಟಿಲು ಹತ್ತಿದವರು. ಮಹಿಳಾ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ನಾವು ಸ್ವಲ್ಪ ಮಟ್ಟಿಗೆ ಪ್ರಗತಿ ಸಾಧಿಸಿದ್ದೇವೆ. ಆದರೆ ಇನ್ನೂ ಕ್ರಮಿಸುವ ದೂರ ಬಹಳವಿದೆ ಎಂದರು. ಚಿಂತಕ ಪ್ರೊ. ಫಣಿರಾಜ್ ಅವರೂ ಈ ಸಂದರ್ಭದಲ್ಲಿ ಮಾತನಾಡಿದರು.

ಇದೇ ವೇಳೆ ಜೆಂಡರ್ ಕ್ಲಬ್-ಲಾ ಸ್ಪೆಕ್ಟರ್‌ನ್ನು ಮಾನಸಿ ಸುಧೀರ್ ಉದ್ಘಾಟಿಸಿದರು.ಶಿಕ್ಷಕೇತರ ಮಹಿಳಾ ನೌಕರರನ್ನು ಸನ್ಮಾನಿಸಲಾಯಿತು. ಶ್ರಾವ್ಯ ಬಾಸ್ರಿ ಕಾರ್ಯಕ್ರಮ ನಿರೂಪಿಸಿದರು. 

Similar News