ಇತ್ತೀಚಿನ ಹಠಾತ್ ಸಾವುಗಳ ಬಗ್ಗೆ ವೈದ್ಯಕೀಯ ಅಧ್ಯಯನ ಅಗತ್ಯ: ಉಡುಪಿ-ಕರಾವಳಿ ಐಎಂಎನಿಂದ ಐಸಿಎಂಆರ್‌ಗೆ ಪತ್ರ

Update: 2023-03-11 15:18 GMT

ಉಡುಪಿ, ಮಾ.11: ಕೋವಿಡ್ ನಂತರ ಕಳೆದ ಸುಮಾರು ಒಂದು ವರ್ಷದಿಂದ ವ್ಯಾಪಕವಾಗಿ ವರದಿಯಾಗುತ್ತಿರುವ ಚಿಕ್ಕಮಕ್ಕಳಿಂದ ಹಿಡಿದು ವಿವಿಧ ಮಯೋಮಾನದವರ ‘ಹಠಾತ್ ಸಾವು’ಗಳ ಕುರಿತಂತೆ ಭಾರತೀಯ ವೈದ್ಯಕೀಯ ಸಂಘದ ಉಡುಪಿ-ಕರಾವಳಿ ಶಾಖೆ ಆಂತರಿಕ ಚರ್ಚೆ ನಡೆಸಿದ್ದು, ಈ ಬಗ್ಗೆ ವೈಜ್ಞಾನಿಕ ಅಧ್ಯಯನದ ಅಗತ್ಯತೆಯನ್ನು ಪ್ರತಿಪಾದಿಸಿ ಐಸಿಎಂಆರ್ ಹಾಗೂ ಐಎಂಎ ಕೇಂದ್ರ ಸಂಘಕ್ಕೆ ಪತ್ರ ಬರೆದು ವೈದ್ಯಕೀಯ ಅಧ್ಯಯನಕ್ಕೆ ಒತ್ತಾಯಿಸಲು ನಿರ್ಧರಿಸಿದೆ  ಎಂದು ಐಎಂಎ ಉಡುಪಿ ಕರಾವಳಿ ಅಧ್ಯಕ್ಷ ಡಾ.ಪಿ.ವಿ.ಭಂಡಾರಿ ತಿಳಿಸಿದ್ದಾರೆ.

ಸಂಘದ ಕರ್ನಾಟಕ ರಾಜ್ಯ ಶಾಖೆಯ ಅಧ್ಯಕ್ಷ ಡಾ.ಶಿವಕುಮಾರ್ ಬಿ. ಲಕ್ಕೋಳ್ ಅವರೊಂದಿಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.

ಕೋವಿಡ್-19ರ ಬಳಿಕ 6 ವರ್ಷದ ಮಗುವಿನಿಂದ ಹಿಡಿದು 20-30ರ ಹರೆಯದ ಯುವಜನರು ಸೇರಿದಂತೆ ಎಲ್ಲಾ ವಯೋಮಾನದವರ ಹೃದಯಾಘಾತವೂ ಸೇರಿದಂತೆ ವಿವಿಧ ಕಾರಣಗಳಿಗಾಗಿ ಹಠಾತ್ ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡುಬರುತ್ತಿದೆ. ಇದು ಗಂಭೀರ ವಿಷಯ ವಾಗಿದ್ದು, ಖಂಡಿತವಾಗಿ ವೈಜ್ಞಾನಿಕ ಅಧ್ಯಯನಕ್ಕೆ ಯೋಗ್ಯವಾದ ವಿಷಯ ಎಂದು ಡಾ.ಭಂಡಾರಿ ತಿಳಿಸಿದರು. ಡಾ.ಶಿವಕುಮಾರ್ ಇದನ್ನು ಅನುಮೋದಿಸಿದರು.

ಭಾರತೀಯ ವೈದ್ಯಕೀಯ ಸಂಘದ ಉಡುಪಿ-ಕರಾವಳಿ ಘಟಕ ಈಗಾಗಲೇ ಈ ಬಗ್ಗೆ ಸಮಾಲೋಚನೆ ನಡೆಸಿದೆ. ಇದಕ್ಕೆ ಕಾರಣಗಳೇನು, ಇದರ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳೇನು ಎಂಬ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಯಬೇಕಾಗಿದೆ ಎಂಬುದು ನಮ್ಮ ಅಭಿಪ್ರಾಯವಾಗಿದೆ ಎಂದು ಡಾ.ಭಂಡಾರಿ ಹಾಗೂ ಸಂಘದ ಸಂಘಟಕ ಡಾ.ವಾಸುದೇವ ವಿವರಿಸಿದರು.

ಈ ಬಗ್ಗೆ ಜಿಲ್ಲಾ ಸಂಘವು ರಾಜ್ಯ ಹಾಗೂ ಕೇಂದ್ರ ಸಂಘಕ್ಕೆ ಪತ್ರ ಬರೆದು ಗಮನ ಸೆಳೆಯಲಿದೆ. ಈ ಬಗ್ಗೆ ಸಂಶೋಧನೆ ಹಾಗೂ ಅಧ್ಯಯನ ನಡೆಸುವ ಅಧಿಕಾರ ಹೊಂದಿರುವ ಐಸಿಎಂಆರ್‌ಗೂ ಪತ್ರ ಬರೆದು ಒತ್ತಾಯಿಸಲಾಗುವುದು. ಒಬ್ಬ ವೈದ್ಯ ಖಂಡಿತ ಇದನ್ನು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ ಎಂದು ಡಾ.ಭಂಡಾರಿ ನುಡಿದರು.

ವಿಶ್ವದ ಅತಿದೊಡ್ಡ ವೈದ್ಯಕೀಯ ಸಂಘ: ಡಾ.ಶಿವಕುಮಾರ್ ಲಕ್ಕೊಳ್ ಅವರು ಐಎಂಎ ಬಗ್ಗೆ ಮಾತನಾಡಿ, ಇದು ವಿಶ್ವದ ಅತಿದೊಡ್ಡ ವೈದ್ಯರ ಸಂಘವಾಗಿದೆ. ಆಧುನಿಕ ವೈದ್ಯ ಪದ್ಧತಿಯನ್ನು ವೃತ್ತಿಯಾಗಿ ಸ್ವೀಕರಿಸಿರುವ ಭಾರತದ ವೈದ್ಯರ ಸ್ವಯಂ ಸೇವಾ ಸಂಘದಲ್ಲಿ 30 ರಾಜ್ಯಗಳ 1765 ಶಾಖೆಗಳಲ್ಲಿ ಒಟ್ಟು 3 ಲಕ್ಷ ವೈದ್ಯರು ಸದಸ್ಯರಾಗಿದ್ದಾರೆ. ಕರ್ನಾಟಕದ 180 ಶಾಖೆಗಳಲ್ಲಿ 28,000ಕ್ಕೂ ಅಧಿಕ ಸದಸ್ಯರಿದ್ದಾರೆ ಎಂದರು.

ಶೀಘ್ರವೇ ಜಾರಿಗೊಳ್ಳಲಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮಸೂದೆಯ ನಿಯಮ ಮತ್ತು ನಿಬಂಧನೆಗಳಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡುವಂತೆ ಸರಕಾರಕ್ಕೆ ಮನವಿ ಮಾಡಿದ್ದು, ಸ್ವಾಯತ್ತತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಿರಲು ನಿರ್ಧರಿ ಸಲಾಗಿದೆ. ಆಧುನಿಕ ವೈದ್ಯಕ್ಷೇತ್ರಕ್ಕೆ ಮಾರಕವಾಗಿರುವ ಹಾಗೂ ಅರೆಬೆಂದ ವೈದ್ಯರನ್ನು ತಯಾರಿಸಿ ಜನರ ಜೀವದೊಂದಿಗೆ ಚೆಲ್ಲಾಟವಾಡಲು ಅವಕಾಶ ನೀಡದಿರುವ ನಿರ್ಧಾರವನ್ನೂ ಕೈಗೊಂಡಿದ್ದೇವೆ ಎಂದು ಡಾ.ಶಿವಕುಮಾರ್ ತಿಳಿಸಿದರು.

ನಕಲಿ ವೈದ್ಯರ ಹಾವಳಿಯನ್ನು ತಡೆಗಟ್ಟಲು, ವೈದ್ಯರ ಹಾಗೂ ವೈದ್ಯ ಸಿಬ್ಬಂದಿಗಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಹಾಗೂ ಹಲ್ಲೆಗಳನ್ನು ತಡೆಗಟ್ಟಲು ಸೂಕ್ತ ಕ್ರಮಕೈಗೊಳ್ಳುವಂತೆ ಸರಕಾರವನ್ನು ಕೋರಲಾಗಿದೆ. ಅಲ್ಲದೇ ವೈದ್ಯರ ರಕ್ಷಣಾ ಕಾನೂನನ್ನು ಜಾರಿಗೆ ತರಲು ಸರಕಾರವನ್ನು ಕೋರಲಾಗಿದೆ ಎಂದರು.

ಕರ್ನಾಟಕ ರಾಜ್ಯದ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತರಲು ಇರುವ ತೊಂದರೆಗಳ ಬಗ್ಗೆ ಗಮನ ಸೆಳೆಯಲಾಗಿದೆ. ಮಾನವ ಸಹಜ ವೈದ್ಯರಿಂದ ನಡೆಯುವ ಸಣ್ಣಪುಟ್ಟ ತಪ್ಪುಗಳಿಗೆ ಪಿಸಿಪಿಎನ್‌ಡಿಟಿ ಕಾನೂನಿನಡಿ ವೈದ್ಯರಿಗೆ ಗಂಭೀರ ಶಿಕ್ಷೆ ನೀಡುವುದನ್ನು ರದ್ದುಗೊಳಿಸುವಂತೆ, ಕೇವಲ ಲಿಂಗ ಪತ್ತೆ ಹಾಗೂ ಭ್ರೂಣಹತ್ಯೆಯಂಥ ಗಂಭೀರ ಪ್ರಕರಣಗಳಲ್ಲಿ ಮಾತ್ರ ಇದನ್ನು ಜಾರಿಗೊಳಿಸುವಂತೆ ಒತ್ತಾಯಿಸಲಾಗಿದೆ ಎಂದರು.

ಆಧುನಿಕ ವೈದ್ಯ ಪದ್ಧತಿಯನ್ನು ಇನ್ನಿತರ ವೈದ್ಯಪದ್ಧತಿ ಜೊತೆ ಸೇರಿಸುವ ಅವೈಜ್ಞಾನಿಕ ವಿಧಾನವನ್ನು ನಿಲ್ಲಿಸುವಂತೆ, ವೈದ್ಯಕೀಯ ಶಿಕ್ಷಣದಲ್ಲೂ ಎಲ್ಲಾ ಪದ್ಧತಿಗಳನ್ನು ಅಳವಡಿಸುವುದನ್ನು ಕೂಡಲೇ ತಡೆಹಿಡಿಯುವಂತೆ ಐಎಂಎ  ಸರಕಾರವನ್ನು ಬಲವಾಗಿ ಆಗ್ರಹಿಸುತ್ತದೆ. ಇದು ಆಧುನಿಕ ವೈದ್ಯಪದ್ಧತಿಗೆ ಮಾರಕವಾಗಲಿದೆ ಎಂಬುದು ನಮ್ಮ ನಂಬಿಕೆಯಾಗಿದೆ ಎಂದು ಡಾ.ಶಿವಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಡಾ.ವೆಂಕಟಾಚಲ ಪತಿ, ಐಎಂಎ ಕರ್ನಾಟಕ ಘಟಕದ ಮಾಜಿ ಅಧ್ಯಕ್ಷ ಡಾ.ಮಧುಸೂದನ್, ಸಹಕಾರ್ಯದರ್ಶಿ ಡಾ.ಎಲ್.ಡಿ.ಮಕಾಳೆ, ಜಿಲ್ಲಾ ಸಂಘಟಕ ಡಾ.ವಾಸುದೇವ್, ಡಾ.ಕೇಶವ ನಾಯಕ್ ಉಪಸ್ಥಿತರಿದ್ದರು.

Similar News