ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಹೂಳೆತ್ತುವ ಕಾಮಗಾರಿ ಪ್ರಾರಂಭ

Update: 2023-03-11 15:22 GMT

ಮಲ್ಪೆ: ಮಲ್ಪೆ ಹಾಗೂ ಆಸುಪಾಸಿನ ಮೀನುಗಾರರ ಬಹುಕಾಲದ ಪ್ರಮುಖ ಬೇಡಿಕೆಯಾದ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ತುಂಬಿರುವ ಹೂಳನ್ನು ತೆಗೆಯುವ ಕಾಮಗಾರಿ ಇದೀಗ ಪ್ರಾರಂಭವಾಗಿದೆ. ಕಳೆದ ಹಲವು ವರ್ಷಗಳಿಂದ ಬಂದರು ಪರಿಸರದಲ್ಲಿ ಹೂಳೆತ್ತುವ ಕಾರ್ಯ ನಡೆಯದೇ, ಪರಿಣಾಮವಾಗಿ ಮೀನುಗಾರಿಕಾ ಬೋಟುಗಳಲ್ಲಿ ಕೆಲಸ ಮಾಡುವ ಮೀನುಗಾರರು ಅಕಸ್ಮಿಕವಾಗಿ ನೀರಿಗೆ ಬಿದ್ದು ಹೂಳಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆಗಳು ವರದಿಯಾಗುತ್ತಿದ್ದವು.

ಮೀನುಗಾರರ ಬೇಡಿಕೆಯಂತೆ ಇದೀಗ ಮಲ್ಪೆ ಬಂದರಿನಲ್ಲಿ ಡ್ರೆಜ್ಜಿಂಗ್ ಪ್ರಾರಂಭಗೊಂಡಿದೆ. ಇಂದು ಕೆಲಸ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ ಉಡುಪಿ ಶಾಸಕ ಕೆ.ರಘುಪತಿ ಭಟ್, ಮಲ್ಪೆ ಬಂದರಿನ ಬೇಸಿನ್ ಹಾಗೂ ನೇವಿಗೇಶನ್ ಚಾನೆಲ್ ನಿರ್ವಹಣಾ ಹೂಳೆತ್ತುವಿಕೆ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು. 

ದೇಶದ ಪ್ರಮುಖ ಸರ್ವಋತು ಮೀನುಗಾರಿಕಾ ಬಂದರುಗಳಲ್ಲಿ ಒಂದಾದ ಮಲ್ಪೆ ಬಂದರಿನಲ್ಲಿ ಪ್ರತಿದಿನ ಸಾವಿರಾರು ಮಂದಿ ಮೀನುಗಾರಿಕಾ ಚಟುವಟಿಕೆಗಳಲ್ಲಿ ನಿರತರಾಗಿದ್ದು, ಸಾವಿರಾರು ವಿವಿಧ ಪ್ರಕಾರದ ಬೋಟುಗಳು ಬಂದರಿನೊಳಗೆ ಬಂದು-ಹೋಗುತ್ತಿರುತ್ತವೆ. ಆದರೆ ದಶಕಗಳಿಗೂ ಅಧಿಕ ಸಮಯದಿಂದ ತುಂಬಿರುವ ಹೂಳು ಬೋಟುಗಳ ಸರಾಗ ಚಲನೆಗೆ ಅಡ್ಡಿಯುಂಟು ಮಾಡುತಿದ್ದು, ತುರ್ತಾಗಿ ಬಂದರಿನಲ್ಲಿ ಹೂಳೆತ್ತುವಂತೆ ವಿವಿಧ ಮೀನುಗಾರಿಕಾ ಸಂಘಟನೆಗಳು ಸರಕಾರಕ್ಕೆ ಮನವಿ ಸಲ್ಲಿಸುತ್ತಿದ್ದವು.

ಕೊನೆಗೂ ರಾಜ್ಯ ಸರಕಾರ ರಾಜ್ಯದ ಪಶ್ಚಿಮ ಕರಾವಳಿಯ ವಿವಿಧ ಬಂದರುಗಳಲ್ಲಿ ಹೂಳೆತ್ತುವ ಕಾರ್ಯಕ್ಕೆ ಅನುದಾನ ಮಂಜೂರು ಮಾಡಿದ್ದು, ಮಲ್ಪೆಯಲ್ಲಿ ಹೂಳೆತ್ತುವ ಇದೀಗ ಕಾರ್ಯ ಭರದಿಂದ ಸಾಗುತ್ತಿದೆ.

ಶಾಸಕ ಈ ಭೇಟಿಯ ಸಂದರ್ಭದಲ್ಲಿ ಮಲ್ಪೆ ಮೀನುಗಾರರ ಸಂಘ ಅಧ್ಯಕ್ಷ ದಯಾನಂದ ಸುವರ್ಣ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Similar News