ಕುಂದಾಪುರ: ಸೋಮವಾರ ಕಾರ್ಮಿಕ ಸಂಘಟನೆಗಳಿಂದ ಧರಣಿ

Update: 2023-03-11 15:24 GMT

ಕುಂದಾಪುರ, ಮಾ.11: ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ಪಡೆಯಲು ಕುಟುಂಬ ಐಡಿ ಕಡ್ಡಾಯಗೊಳಿಸಿರು ವುದನ್ನು ಹಿಂಪಡೆಯಲು ಹಾಗೂ ನಿಯಮಾವಳಿಯನ್ನು ಸರಳಗೊಳಿಸಲು ಕೋರಿ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಮಾ.13ರ ಸೋಮವಾರ ಕುಂದಾಪುರದ ಶಾಸ್ತ್ರೀ ಸರ್ಕಲ್‌ನಲ್ಲಿ ಪ್ರತಿಭಟನಾ ಧರಣಿ ನಡೆಸಲಿವೆ.

ಸಂಘ ಈ ಬಗ್ಗೆ ಕುಂದಾಪುರದ ಕಾರ್ಮಿಕ ನಿರೀಕ್ಷಕರು ಹಾಗೂ  ಕರ್ನಾಟಕ ಕಟಚ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಜಂಟಿ ಕಾರ್ಯದರ್ಶಿಗಳಿಗೆ ಈ ಬಗ್ಗೆ ಮನವಿಯೊಂದನ್ನು ಸಲ್ಲಿಸಿದೆ.ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು 2022-23ನೇ ಸಾಲಿನ ಶೈಕ್ಷಣಿಕ ಧನಸಹಾಯ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಆದರೆ ಮಂಡಳಿ ಅರ್ಜಿ ಸಲ್ಲಿಸುವ ವಿಧಾನಗಳನ್ನು ಹಲವು ಬಾರಿ ಬದಲಾಯಿಸುತ್ತಾ ಬಂದಿದೆ ಎಂದು ಮನವಿಯಲ್ಲಿ ದೂರಲಾಗಿದೆ.

ಈ ಬಾರಿಯೂ ಶೈಕ್ಷಣಿಕ ಧನಸಹಾಯ ಅರ್ಜಿ ಸಲ್ಲಿಸಲು ಹಲವು ಬದಲಾವಣೆ ಮಾಡಿರುವುದು ಕಟ್ಟಡ ಕಾರ್ಮಿಕರ ಮಕ್ಕಳನ್ನು ಶೈಕ್ಷಣಿಕ ಧನಸಹಾಯದಿಂದ ವಂಚಿಸುವ ಕ್ರಮವಾಗಿದೆ.ಈ ನಿಯಮಗಳನ್ನು ಮಂಡಳಿ ಪರಿಶೀಲಿಸಿ ಸರಳಗೊಳಿಸಲು ಕ್ರಮವಹಿಸಿ ಶೈಕ್ಷಣಿಕ ಧನಸಹಾಯ ಪಡೆಯಲು ಅನುಕೂಲ ಮಾಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ಕಾರ್ಮಿಕ ಸಂಘಟನೆಗಳ ಪ್ರತಿಭಟನಾ ಧರಣಿ ಮಾ.13ರ ಸೋಮವಾರ ಬೆಳಗ್ಗೆ 9:30ಕ್ಕೆ ಕುಂದಾಪುರದ ಶಾಸ್ತ್ರೀ ಸರ್ಕಲ್‌ನಲ್ಲಿ ನಡೆಯಲಿದೆ ಎಂದು  ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Similar News