ರಾಷ್ಟ್ರೀಯ ಯುವ ಅಥ್ಲೆಟಿಕ್ ಚಾಂಪಿಯನ್‌ಷಿಪ್: ಸಂದೀಪ್ ವಿನೋದ್‌ಗೆ 110 ಹರ್ಡಲ್ಸ್ ಚಿನ್ನ
ಉಡುಪಿ, ಮಾ.11: ನಿಟ್ಟೆ ವಿದ್ಯಾಸಂಸ್ಥೆಯ ಪ್ರಾಯೋಜಕತ್ವದಲ್ಲಿ ಉಡುಪಿಯ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ 18ನೇ ರಾಷ್ಟ್ರೀಯ ಯೂತ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಮಹಾರಾಷ್ಟ್ರದ ಸಂದೀಪ್ ವಿನೋದ್ ಗೊಂಡಾ ಅವರು 18 ವರ್ಷದೊಳಗಿನ ಬಾಲಕರ 110 ಮೀ. ಹರ್ಡಲ್ಸ್‌ನಲ್ಲಿ 13.86ಸೆ.ಗಳ ಸಾಧನೆಯೊಂದಿಗೆ ಚಿನ್ನದ ಪದಕ ಗೆದ್ದುಕೊಂಡರು. ಕೇರಳದ ಕಿರಣ್ ಕೆ. ಬೆಳ್ಳಿ ಹಾಗೂ ಒರಿಸ್ಸಾದ ನಿತೀಶ್ ಕುಲ್ಲೂ ಕಂಚಿನ ಪದಕ ಜಯಿಸಿದರು.
ಬಾಲಕರ 400ಮೀ. ಓಟದ ಸ್ಪರ್ಧೆಯಲ್ಲಿ ದಿಲ್ಲಿಯ ನವಪ್ರೀತ್ ಸಿಂಗ್ ಅವರು 47.58 ಸೆ.ಸಾಧನೆಯೊಂದಿಗೆ ಚಿನ್ನದ ಪದಕ ಜಯಿಸಿದರೆ, ತಮಿಳುನಾಡಿನ ಶರಣ್ ಎಂ. ಬೆಳ್ಳಿ ಹಾಗೂ ಉತ್ತರ ಪ್ರದೇಶದ ಶಿವಂ ಕಂಚಿನ ಪದಕ ಗೆದ್ದುಕೊಂಡರು. ಬಾಲಕಿಯರ 400ಮೀ. ಓಟದಲ್ಲಿ ಪಶ್ಚಿಮ ಬಂಗಾಲದ ರಿರೆನಾ ಮಲ್ಲಿಕ್ ಹೀನಾ 53.44ಸೆ.ಗಳ ಸಾಧನೆಯೊಂದಿಗೆ ಚಿನ್ನ ಗೆದ್ದರೆ, ಮಹಾರಾಷ್ಟ್ರದವರಾದ ಇಶಾ ರಾಜೇಶ್ ಜಾಧವ್ ಹಾಗೂ ಖುಷಿ ಸದಾನಾ ಉಮೇಶ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು.
ಬಾಲಕಿಯರ ಡಿಸ್ಕಸ್ ಎಸೆತದಲ್ಲಿ ಹರ್ಯಾಣದ ರಿದ್ಧೀ ಅವರು 43.37ಮೀ. ದೂರ ಡಿಸ್ಕ್ ಎಸೆದು ಗೆದ್ದುಕೊಂಡರೆ 43.36ಮೀ. ಸಾಧನೆಯೊಂದಿಗೆ ಪಂಜಾಬ್‌ನ ಅಮಾನತ್ ಕಾಂಬೋಜ್ ಬೆಳ್ಳಿ ಹಾಗೂ ರಾಜಸ್ತಾನದ ನಿಕಿತಾ ಕುಮಾರಿ ಕಂಚಿನ ಪದಕ ಗೆದ್ದರು. ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಉಡುಪಿಯ ಮಾಧುರ್ಯ ಅವರು 37.75ಮೀ. ಸಾಧನೆಯೊಂದಿಗೆ 5ನೇ ಸ್ಥಾನ ಪಡೆಯಲು ಮಾತ್ರ ಯಶಸ್ವಿಯಾದರು.
ಹರ್ಯಾಣದ ಪೂಜಾ ಬಾಲಕಿಯರ ಹೈಜಂಪ್‌ನಲ್ಲಿ 1.76ಮೀ. ಸಾಧನೆಯೊಂದಿಗೆ ಚಿನ್ನ ಗೆದ್ದರೆ, ಪಶ್ಚಿಮ ಬಂಗಾಲದ ಮೌರಾ ಮುಖರ್ಜಿ ಬೆಳ್ಳಿ ಹಾಗೂ ಕರ್ನಾಟಕದ ಗೌತಮಿ ಕಂಚಿನ ಪದಕ ಗೆದ್ದರು. ಬಾಲಕರ ಲಾಂಗ್ ಜಂಪ್ ನಲ್ಲಿ ಹರ್ಯಾಣದ ಮಹಮ್ಮದ್ ಅಟ್ಟಾ ಸಾಝಿದ್ 6.92ಮೀ. ದೂರ ನೆಗೆತದೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ, ಉತ್ತರ ಪ್ರದೇಶದ ಅಭಿಷೇಕ್ ಯಾದವ್ ಬೆಳ್ಳಿ ಹಾಗೂ ತಮಿಳುನಾಡಿನ ಹರೀಶ್ ಆದಿತ್ಯ ಕಂಚಿನ ಪದಕ ಗೆದ್ದರು.
ಬಾಲಕರ ಶಾಟ್‌ಪುಟ್ ಸ್ಪರ್ಧೆಯಲ್ಲಿ ಮಹಾರಾಷ್ಟ್ರೀಯದ ಮಂಜಿತ್ ಕುಮಾರ್ ರಮೇಶ್ವ 17.25ಮೀ. ದೂರ ಗುಂಡು ಎಸೆದು ಚಿನ್ನದ ಪದಕ ಜಯಿಸಿದರು. ರಾಜಸ್ತಾನದ ದಿನೇಶ್ ಬೆಳ್ಳಿ ಹಾಗೂ ಉತ್ತರ ಪ್ರದೇಶದ ಸಾರ್ಥಕ್ ಸಿಂಗ್ ಕಂಚಿನ ಪದಕ ಜಯಿಸಿದರು. 18 ವರ್ಷದೊಳಗಿನ ಬಾಲಕಿಯರ ಟ್ರಿಪಲ್ ಜಂಪ್‌ನಲ್ಲಿ ತಮಿಳುನಾಡಿನ ಪ್ರವೀಣ್ ರಾಜೇಶ್ 11.93 ದೂರ ನೆಗೆದು ಚಿನ್ನದ ಪದಕ ಗೆದ್ದುಕೊಂಡರು. ಜಾರ್ಖಂಡ್‌ನ ಪ್ರೀತಿ ಲಾಕ್ರಾ ಹಾಗೂ ರಾಜಸ್ತಾನದ ಪೂನಂ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಜಯಿಸಿದರು.
ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ, ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ ಹಾಗೂ ಉಡುಪಿ ಜಿಲ್ಲಾ ಅಮೆಚೂರು ಅಥ್ಲೆಟಿಕ್ ಅಸೋಸಿಯೇಷನ್‌ಗಳ ಆಶ್ರಯದಲ್ಲಿ ನಡೆಯುತ್ತಿರುವ ಮೂರು ದಿನಗಳ ಈ ಕ್ರೀಡಾ ಕೂಟಕ್ಕೆ ನಾಳೆ ಕೊನೆಯ ದಿನವಾಗಿದೆ.