ಇನ್ಫ್ಲುಯೆಂಝಾ, ಕೋವಿಡ್-19 ಪ್ರಕರಣಗಳಲ್ಲಿ ಹೆಚ್ಚಳ: ನಿಗಾವಿರಿಸಲು ರಾಜ್ಯ, ಕೇಂದ್ರಾಡಳಿತಗಳಿಗೆ ಕೇಂದ್ರದ ಸೂಚನೆ

Update: 2023-03-12 16:42 GMT

ಹೊಸದಿಲ್ಲಿ,ಫೆ.12: ಕಳೆದ ಕೆಲವು ತಿಂಗಳುಗಳಲ್ಲಿ ಕೋವಿಡ್19  ಸೋಂಕು ರೋಗ ಹರಡುವಿಕೆಯ ಪ್ರಮಾಣವು ಗಣನೀಯವಾಗಿ ಕುಸಿದಿದ್ದರೆ, ಇನ್ನು  ಕೆಲವು ರಾಜ್ಯಗಳಲ್ಲಿ ಕೋವಿಡ್19 ಪಾಸಿಟಿವಿಟಿ ದರದಲ್ಲಿ ಹೆಚ್ಚಳವಾಗಿರುವುದು ಕಳವಳಕಾರಿಯಾಗಿದ್ದು, ಅದನ್ನು ಸಮಪರ್ಕವಾಗಿ ನಿಭಾಯಿಸಬೇಕಾಗಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ  ರಾಜೇಶ್ ಭೂಷಣ್ ರವಿವಾರ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಕೋವಿಡ್19 ನಿಯಂತ್ರಣಕ್ಕೆ ಸಂಬಂಧಿಸಿದ ಔಷಧಿಗಳು, ವೈದ್ಯಕೀಯ ಉಪಕರಣಗಳು ಹಾಗೂ ವೈದ್ಯಕೀಯ ಆಮ್ಲಜನಕವನ್ನು ಆಸ್ಪತ್ರೆಗಳಲ್ಲಿ ಸಮರ್ಪಕವಾಗಿ ದಾಸ್ತಾನಿರಿಸುವಂತೆ ಪತ್ರದಲ್ಲಿ ಅಧಿಕಾರಿಗಳು ಆಗ್ರಹಿಸಿದ್ದಾರೆ.

ಈ ಮಧ್ಯೆ ಇನ್ಫ್ಲುಯೆಂಝಾ ಎ ಪ್ರಕರಣಗಳು ಕೂಡಾ ಡಿಸೆಂಬರ್ ತಿಂಗಳ ಉತ್ತರಾರ್ಧದಲ್ಲಿ ಏರಿಕೆಯನ್ನು ಕಂಡಿವೆ ಎಂದು ಕೇಂದ್ರ ಸರಕಾರವು ತಿಳಿಸಿದೆ.

‘‘ದೇಶದ ವಿವಿಧ ವೈದ್ಯಕೀಯ  ಪ್ರಯೋಗಾಲಯಗಳಲ್ಲಿ ವಿಶ್ಲೇಷಿಸಲಾದ ಮಾದರಿಗಳಲ್ಲಿ ಇನ್ಫ್ಲುಯೆಂಝಾ ಎ (ಎಚ್3ಎನ್2) ವೈರಸ್ನ  ಉಪಸ್ಥಿತಿ ಕಂಡುಬಂದಿರುವುದು ನಿರ್ದಿಷ್ಟ ಆತಂಕಕಾರಿಯಾದ ವಿಷಯವಾಗಿದೆ ’’ ಎಂದು ಕೇಂದ್ರ ಸರಕಾರವು ಹೇಳಿಕೆಯಲ್ಲಿ ತಿಳಿಸಿದೆ. ‘‘ ಕಿರಿಯ ಮಕ್ಕಳು, ವಯೋವೃದ್ಧರು ಹಾಗೂ  ಅನಾರೋಗ್ಯಗಳಿಂದ ಬಳಲುತ್ತಿರುವವರು ಎಚ್1ಎನ್1, ಎಚ್3ಎನ್2, ಆ್ಯಡೆನೊವೈರಸ್  ಇತ್ಯಾದಿ  ಸೋಂಕುಗಳಿಗೆ ಸುಲಭವಾಗಿ ತುತ್ತಾಗುವ ಅಪಾಯವಿದೆ ಎಂದು ಅದು ಹೇಳಿದೆ.

 ಎಚ್3ಎನ್2 ಇನ್ಫ್ಲುಯೆಂಝಾ ವೈರಸ್ನ ಕಾರಣದಿಂದಾಗಿ  ಕರ್ನಾಟಕ ಹಾಗೂ ಹರ್ಯಾಣದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದು, ಇದು ಈ ಸೋಂಕಿಗೆ ಬಲಿಯಾದ ಮೊದಲ ಪ್ರಕರಣಗಳಾಗಿವೆ.

 ಎನ್ಫ್ಲುಯೆಂಝಾ ಟೈಪ್ ಎ ವೈರಸ್, ಸಾಂಕ್ರಾಮಿಕ ರೋಗವನ್ನು ಉಂಟು ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಎಂದು ವಿಶ್ವ ಆರೋಗ್ಯಸಂಸ್ಥೆಯು  ಆತಂಕ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ಹೇಳಿಕೆಯನ್ನು ನೀಡಿದೆ.

ಎಚ್3ಎನ್2  ವೈರಸ್ ಹರಡುವುದನ್ನು ತಡೆಯುವುದಕ್ಕಾಗಿ  ಉಸಿರಾಟದ ಹಾಗೂ ಕೈ ಸ್ವಚ್ಛತೆಯ ಕುರಿತಾದ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುವಂತೆ ಸಾಮುದಾಯಿಕವಾಗಿ ಜಾಗೃತಿ ಮೂಡಿಸುವುದು  ಅತ್ಯಂತ ಮುಖ್ಯವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು  ಶನಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ. ಸೋಂಕಿನ ಹರಡುವಿಕೆಯ ಬಗ್ಗೆ ತ್ವರಿತವಾಗಿ ವರದಿ ಮಾಡುವುದು ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರೊಂದಿಗೆ ಸಂಪರ್ಕವನ್ನು ಮಿತಿಗೊಳಿಸುವುದು ಮುಖ್ಯವಾಗಿದೆ ಎಂದು  ಸಚಿವಾಲಯ ತಿಳಿಸಿದೆ

ಇದನ್ನು ಓದಿ: ಹೋಳಿ: ರಸ್ತೆಯಲ್ಲಿ ನಡೆದು ಹೋಗುತ್ತಿರುವ ಬುರ್ಕಾಧಾರಿ ಮಹಿಳೆಗೆ ವಾಟರ್‌ ಬಲೂನ್‌ ಎಸೆಯುವ ವಿಡಿಯೋ ವೈರಲ್

Similar News