×
Ad

'ಟೈರ್ ಸ್ಫೋಟ ದೇವರ ಕೃತ್ಯವಲ್ಲ...': ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಲು ಹೈಕೋರ್ಟ್ ಆದೇಶ

Update: 2023-03-12 22:27 IST

ಟೈರ್ ಸ್ಫೋಟ ದೇವರ ಕೃತ್ಯವಲ್ಲ, ಮಾನವ ನಿರ್ಲಕ್ಷ್ಯ ಕಾರಣ: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಲು ಆದೇಶ  

ಮುಂಬೈ,ಮಾ.12: ಟೈರ್ ಸ್ಫೋಟವು ದೇವರ ಕೃತ್ಯವಲ್ಲ. ಆದರೆ ಮಾನವ ನಿರ್ಲಕ್ಷ್ಯತನದಿಂದಾದುದಾಗಿದೆ ಎಂದ ಪ್ರತಿಪಾದಿಸಿರುವ, ಬಾಂಬೆ ಹೈಕೋರ್ಟ್ ಕಾರು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 1.25 ಕೋಟಿ ರೂ. ಪರಿಹಾರ ನೀಡಬೇಕೆಂಬ ನ್ಯಾಯಾಧೀಕರಣದ ಆದೇಶವನ್ನು ಎತ್ತಿಹಿಡಿದಿದೆ.

ಅಪಘಾತದ ಮೃತಪಟ್ಟ ಮಕರಂದ ಪಟವರ್ಧನ್ ಅವರ ಕುಟುಂಬಕ್ಕೆ 1.25 ಕೋಟಿ ರೂ. ಪರಿಹಾರ ನೀಡುವಂತೆ ಮೋಟಾರು ಅಪಘಾತ ಕ್ಲೇಮುಗಳ ನ್ಯಾಯಾಧೀಕರಣದ 2016ರ ತೀರ್ಪನ್ನು ಪ್ರಶ್ನಿಸಿ  ‘ನ್ಯೂ ಇಂಡಿಯಾ ಆ್ಯಶೂರೆನ್ಸ್’ ಕಂಪೆನಿ ಸಲ್ಲಿಸಿದ ಅರ್ಜಿಯನ್ನು  ನ್ಯಾಯಮೂರ್ತಿ ಎಸ್.ಜಿ.ದಿಘೆ ಅವರನ್ನೊಳಗೊಂಡ ನ್ಯಾಯಪೀಠವು ಫೆಬ್ರವರಿ 17ರಂದು  ತಳ್ಳಿಹಾಕಿದೆ.

2010ರ ಅಕ್ಟೋಬರ್ 25ರಂದು ಪಟವರ್ಧನ್ (38) ಅವರು ತನ್ನ ಇಬ್ಬರು ಸಹದ್ಯೋಗಿಗಳೊಂದಿಗೆ ಪುಣೆಯಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಈ ಅವಘಡ ಸಂಭವಿಸಿತ್ತು.

ಪಟವರ್ಧನ್ ಅವರ ಸಹದ್ಯೋಗಿ ಈ ಕಾರಿನ ಮಾಲಕನಾಗಿದ್ದು, ಆತ ವಾಹನವನ್ನು    ಒರಟಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದಾಗ,  ಹಿಂದಿನ ಚಕ್ರವು ಸ್ಫೋಟಿಸಿತ್ತು .ಇದರಿಂದ ಕಾರು ಅಳವಾದ ಹೊಂಡಕ್ಕೆ ಬಿದ್ದು, ಸ್ಥಳದಲ್ಲೇ ಪಟವರ್ಧನ್ ಸಾವನ್ನಪ್ಪಿದ್ದರು.

ಮೃತನು ಆತನ ಕುಟುಂಬದ  ಏಕೈಕ ಅನ್ನದಾತನಾಗಿದ್ದನೆಂದು ಗಮನಕ್ಕೆ ತೆಗೆದುಕೊಂಡ ನ್ಯಾಯಾಧೀಕರಣವು  ಸಂತ್ರಸ್ತ ಕುಟುಂಬಕ್ಕೆ 1.25  ಕೋಟಿ ರೂ. ಪರಿಹಾರ ನೀಡುವಂತೆ ವಿಮಾ ಕಂಪೆನಿಗೆ  ಮೋಟಾರು ವಾಹನಗಳ ನ್ಯಾಯಾಧೀಕರಣವು  ಆದೇಶಿಸಿತ್ತು.

ನ್ಯಾಯಾಧೀಕರಣವು ಆದೇಶಿಸಿರುವ ಪರಿಹಾರಧನದ ಮೊತ್ತವು  ತೀರಾ ಅತಿಯಾಗಿದೆ ಎಂದು  ವಿಮಾ ಕಂಪೆನಿಯು ತನ್ನ ಮನವಿಯಲ್ಲಿ ತಿಳಿಸಿತ್ತು. ಟೈರ್ ಸ್ಫೋಟವು ದೇವರ ಕೃತ್ಯವಾಗಿತ್ತೇ ಹೊರತು ಚಾಲಕನ ನಿರ್ಲಕ್ಷ್ಯದಿಂದಾದುದಲ್ಲ ಎಂದು ಅದು ವಾದಿಸಿತ್ತು.

ಆದರೆ ವಿಮಾಕಂಪೆನಿಯ ವಾದವನ್ನು ಪುರಸ್ಕರಿಸಲು ಹೈಕೋರ್ಟ್ ನಿರಾಕರಿಸಿದೆ. ಕಾನೂನು ಪರಿಭಾಷೆಯಲ್ಲಿ  ‘ದೇವರ ಕೃತ್ಯ’ ವೆಂಬುದು   ‘‘ನಿಯಂತ್ರಿಸಲು ಸಾಧ್ಯವಿಲ್ಲದಂತಹ ಪ್ರಾಕೃತಿಕ ಶಕ್ತಿಗಳ ಕಾರ್ಯಾಚರಣೆ’ ಎಂಬುದಾಗಿದೆ.  ಯಾವುದೇ ವ್ಯಕ್ತಿಯು ಹೊಣೆಗಾರನಾಗದೆ ಸಂಭವಿಸುವ ಅನಿರೀಕ್ಷಿತವಾದ  ಸಹಜ ಘಟನೆಯಾಗಿರುತ್ತದೆ. ಆದರೆ ಟೈರ್ ಸ್ಫೋಟದ ಘಟನೆಯನ್ನು  ದೇವರ ಕೃತ್ಯವೆಂದು ಬಣ್ಣಿಸಲು ಸಾಧ್ಯವಿಲ್ಲ. ಇದು ಮಾನವ ನಿರ್ಲಕ್ಷ್ಯದ ಕೃತ್ಯವಾಗಿದೆ’’ ಎಂದು ನ್ಯಾಯಾಲಯ ಹೇಳಿದೆ.

Similar News