ಮೂರು ದಿನಗಳಲ್ಲಿ ಎಳೆಯ ವಯಸ್ಸಿನ ಇಬ್ಬರು ಸೋದರರು ಬೀದಿನಾಯಿಗಳ ದಾಳಿಗೆ ಬಲಿ

ದಿಲ್ಲಿಯಲ್ಲಿ ನಡೆದ ಆಘಾತಕಾರಿ ಘಟನೆ

Update: 2023-03-12 17:36 GMT

ಹೊಸದಿಲ್ಲಿ,ಮಾ.12:  ಕಳೆದ ಮೂರು ದಿನಗಳಲ್ಲಿ ಎಳೆಯ ವಯಸ್ಸಿನ ಇಬ್ಬರು ಸಹೋದರರು   ಬೀದಿನಾಯಿಗಳ ದಾಳಿಯಿಂದ ಸಾವನ್ನಪ್ಪಿದ ದಾರುಣ ಘಟನೆ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ವಸಂತಕುಂಜ್ ಪ್ರದೇಶದಲ್ಲಿ  ವರದಿಯಾಗಿದೆ.

ಮೊದಲ ಘಟನೆ ಶುಕ್ರವಾರದಂದು ನಡೆದಿದ್ದು,ವಸಂತ ಕುಂಜ್ನ ಸಿಂಧಿ ಕ್ಯಾಂಪ್ ಸಮೀಪ ಬೀದಿನಾಯಿಯೊಂದು ಏಳು ವರ್ಷ ವಯಸ್ಸಿನ ಆನಂದ್ ಮೇಲೆ ದಾಳಿ ನಡೆಸಿದ್ದು, ಆತ ಗಂಭೀರಗಾಯಗಳೊಂದಿಗೆ ಸಾವನ್ನಪ್ಪಿದ್ದ.  ಸಿಂಧಿ ಕ್ಯಾಂಪ್ ಪ್ರದೇಶವು  ಕೊಳೆಗೇರಿಗಳನ್ನು ಒಳಗೊಂಡಿದ್ದು, ಅವು ಅರಣ್ಯಜಾಗದಲ್ಲಿ ನಿರ್ಮಾಣವಾಗಿವೆ.

ಇದಾದ ಎರಡು ದಿನಗಳ ನಂತರ, ಅಂದರೆ ರವಿವಾರ ಆನಂದ್ನ ಸಹೋದರ

ಐದು ವರ್ಷದ ಆದಿತ್ಯ ಕೂಡಾ ಬೀದಿನಾಯಿಗಳ ದಾಳಿಯಿಂದ ಸಾವನ್ನಪ್ಪಿದ್ದಾನೆ.  ಮೂತ್ರ ವಿಸರ್ಜನೆಗಾಗಿ ತನ್ನ ಗುಡಿಸಲಿನಿಂದ ಹೊರಬಂದಿದ್ದ ಬಾಲಕನ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ್ದಾಗಿ ಆತನ ಬಂಧುಗಳು ತಿಳಿಸಿದ್ದಾರೆ.

ಬೀದಿನಾಯಿಗಳ ದಾಳಿಗೆ  ಎಳೆಯ ವಯಸ್ಸಿನ ಇಬ್ಬರು ಬಾಲಕರು ಬಲಿಯಾಗಿರುವುದಕ್ಕೆ ದಕ್ಷಿಣ ದಿಲ್ಲಿ ಬಿಜೆೆಪಿ ಸಂಸದ ರಮೇಶ ಬಿದೂರಿ ಆಘಾತ ವ್ಯಕ್ತಪಡಿಸಿದ್ದಾರೆ.

‘‘ ಬೀದಿ ನಾಯಿಗಳನ್ನು ಸೆರೆಹಿಡಿಯುವುದು  ದಿಲ್ಲಿ ಮಹಾನಗರಪಾಲಿಕೆಯ ಹೊಣೆಗಾರಿಕೆಯಾಗಿದೆ. ಆಪ್ ಸರಕಾರವು ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ.  ತಮಗೆ ಉಚಿತಕೊಡುಗೆಗಳು ಬೇಕೇ ಹಾಗೂ ಶ್ರೀಲಂಕಾದಂತೆ ನಾಶವಾಗಬೇಕೇ ಇಲ್ಲ ತಮ್ಮ ಮಕ್ಕಳನ್ನು ರಕ್ಷಿಸಬೇಕೇ ’’ ಎಂಬುದನ್ನು  ದಿಲ್ಲಿಯ ಜನತೆ ನಿರ್ಧರಿಸಬೇಕಾಗಿದೆ ಎಂದು ಹೇಳಿದ್ದಾರೆ.

 ಈ ಪ್ರದೇಶದಲ್ಲಿರುವ ಬೀದಿನಾಯಿಗಳನ್ನು ಹಿಡಿಯುವಂತೆ ತಾನು ಹಲವಾರು ಬಾರಿ ದಿಲ್ಲಿ ನಗರಾಡಳಿತಕ್ಕೆ ಮನವಿ ಮಾಡಿದ್ದೆ. ಆದರೆ ತಮಗೆ ಬೀದಿನಾಯಿಗಳನ್ನು  ಹಿಡಿಯಲು ಬೇಕಾದ ಸಲಕರಣೆಗಳಿಲ್ಲ ಮತ್ತು ಬೀದಿನಾಯಿಗಳನ್ನು ಸೆರೆಹಿಡಿಯಲು ಗುತ್ತಿಗೆಯನ್ನು ನವೀಕರಿಸಲಾಗಿಲ್ಲವೆಂದು ವರದಿ ಹೇಳಿದೆ.

Similar News