ಉತ್ತರ ಪ್ರದೇಶ: ಅಭಿವೃದ್ಧಿ ಕೆಲಸ ಕುರಿತು ಸಚಿವೆಯನ್ನು ಪ್ರಶ್ನಿಸಿದ ಪತ್ರಕರ್ತನನ್ನು ಬಂಧಿಸಿದ ಪೊಲೀಸರು

Update: 2023-03-14 07:43 GMT

ಲಕ್ನೋ: ಉತ್ತರ ಪ್ರದೇಶದ (Uttar Pradesh) ಸಂಭಲ್‌ ಎಂಬಲ್ಲಿ ಯುಟ್ಯೂಬ್‌ ನ್ಯೂಸ್‌ ಚಾನಲ್‌ ನಡೆಸುವ ವ್ಯಕ್ತಿಯೊಬ್ಬನನ್ನು ಸ್ಥಳೀಯ ಬಿಜೆಪಿ (BJP) ನಾಯಕನ ದೂರಿನ ಆಧಾರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಸಚಿವರೊಬ್ಬರ ಕಾರ್ಯಕ್ರಮದ ವೇಳೆ ಸರ್ಕಾರಿ ಕೆಲಸದಲ್ಲಿ ಹಸ್ತಕ್ಷೇಪ ನಡೆಸಿದ್ದಾರೆ ಹಾಗೂ ತನ್ನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಭಾರತೀಯ ಜನತಾ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶುಭಂ ರಾಘವ್‌ ಎಂಬವರು ನೀಡಿದ ದೂರಿನ ಆಧಾರದಲ್ಲಿ ಪತ್ರಕರ್ತ (Journalist) ಸಂಜಯ್‌ ರಾಣಾ ಅವರನ್ನು ಬಂಧಿಸಲಾಗಿದೆ ಎಂದು indianexpress.com ವರದಿ ಮಾಡಿದೆ.

ಮಾರ್ಚ್‌ 11 ರಂದು ರಾಜ್ಯದ  ಮಾಧ್ಯಮಿಕ  ಶಿಕ್ಷಣ ಸಚಿವೆ ಗುಲಾಬ್‌ ದೇವಿ ಅವರು ಬುಧ್‌ನಗರ್‌ ಖಂಡ್ವಾ ಗ್ರಾಮದಲ್ಲಿ ಚೆಕ್‌ ಡ್ಯಾಂ ಶಂಕುಸ್ಥಾಪನೆಗೆಂದು ಆಗಮಿಸಿದ್ದರು. ಈ ಸಂದರ್ಭ ರಾಣಾ ಅವರು ಸಚಿವೆಗೆ  ಆಕೆ ಹಿಂದಿನ ವಿಧಾನಸಭಾ ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸದೇ ಇರುವ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದರು.

ಈ ಕಾರ್ಯಕ್ರಮದ ನಂತರ ಶುಭಂ ರಾಘವ್‌ ಅವರು ಚಂದೌಸಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸರ್ಕಾರಿ ಕೆಲಸದಲ್ಲಿ ಹಸ್ತಕ್ಷೇಪ ನಡೆಸದಂತೆ ಕೇಳಿಕೊಂಡಿದ್ದಕ್ಕಾಗಿ ತನ್ನ ಮೇಲೆ ಹಲ್ಲೆ ನಡೆಸಿ ಬೆದರಿಕೆಯೊಡ್ಡಿದ್ದರು ಎಂದು ರಾಘವ್‌ ಆರೋಪಿಸಿದ್ದರು.

ಪತ್ರಕರ್ತನನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿರುವ ರಾಣಾ ತಾವು ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಪ್ರಶ್ನೆ ಕೇಳಿದ್ದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಏರ್ ಇಂಡಿಯಾ ವಿಮಾನದಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದ ವ್ಯಕ್ತಿಗೆ ಜಾಮೀನು ಸಿಕ್ಕರೂ ಜೈಲುಪಾಲು; ಕಾರಣವೇನು ಗೊತ್ತೇ?

Similar News