ಲೈಂಗಿಕ ಉದ್ದೇಶವಿಲ್ಲದೆ ಅಪ್ರಾಪ್ತೆಯ ಬೆನ್ನು, ತಲೆ ಸವರುವುದು ದೌರ್ಜನ್ಯವೆಂದು ತಿಳಿಯಲಾಗದು: ಬಾಂಬೆ ಹೈಕೋರ್ಟ್‌

Update: 2023-03-14 09:07 GMT

ಮುಂಬೈ: ಯಾವುದೇ ಲೈಂಗಿಕ ಉದ್ದೇಶವಿಲ್ಲದೆ ಅಪ್ರಾಪ್ತ ಬಾಲಕಿಯೊಬ್ಬಳ ತಲೆ ಮತ್ತು ಬೆನ್ನನ್ನು ಸವರುವುದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಂದು ಪರಿಗಣಿಸಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟಿನ (Bombay High Court) ನಾಗ್ಪುರ ಪೀಠ ಹೇಳಿದೆಯಲ್ಲದೆ ಇಂತಹ ಒಂದು ಪ್ರಕರಣದಲ್ಲಿ ದೋಷಿ ಎಂದು ಘೋಷಿತನಾಗಿದ್ದ 28 ವರ್ಷದ ಯುವಕನೊಬ್ಬನನ್ನು ಖುಲಾಸೆಗೊಳಿಸಿದೆ.

ಘಟನೆ 2012 ರಲ್ಲಿ ನಡೆದಿತ್ತು. ಆಗ 18 ವರ್ಷದವನಾಗಿದ್ದ ಯುವಕ 12 ವರ್ಷದ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಂದು ಆರೋಪಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಆರೋಪಿಯು ತಲೆ ಹಾಗೂ ಬೆನ್ನನ್ನು ಸವರಿದ್ದ ಹಾಗೂ ತಾನು ಬೆಳೆದಿದ್ದೇನೆಂದು ಹೇಳಿದ್ದ ಎಂದು ಸಂತ್ರಸ್ತೆ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಳು. ಆತ ಹೀಗೆ ಮಾಡಿದಾಗ ತಳಮಳಕ್ಕೊಳಗಾದ ಬಾಲಕಿ ಬೊಬ್ಬೆ ಹೊಡೆದಿದ್ದಳೆಂದು ಹೇಳಲಾಗಿತ್ತು.

ವಿಚಾರಣಾ ನ್ಯಾಯಾಲಯವು ಯುವಕನನ್ನು ದೋಷಿ ಎಂದು ಘೋಷಿಸಿ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆತ ಹೈಕೋರ್ಟ್‌ ಕದ ತಟ್ಟಿದ್ದ.

ಯುವಕನ ಕೃತ್ಯದ ಹಿಂದೆ ಲೈಂಗಿಕ ಉದ್ದೇಶವಿರಲಿಲ್ಲ, ಬಾಲಕಿಯನ್ನು ಚಿಕ್ಕವಳಿರುವಾಗ ನೋಡಿದ್ದರಿಂದ ಈಗ ಬೆಳೆದು ನಿಂತಿದ್ದಾಳೆ ಎಂದಷ್ಟೇ ಹೇಳಿದ್ದ ಎಂದು ಹೈಕೋರ್ಟ್‌ ಹೇಳಿತಲ್ಲದೆ  ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಉದ್ದೇಶ ಆರೋಪಿಗಿತ್ತು ಎಂಬುದಕ್ಕೆ ಪ್ರಾಸಿಕ್ಯೂಶನ್‌ ಯಾವುದೇ ಪುರಾವೆ ಒದಗಿಸಿಲ್ಲ ಎಂದು ಹೇಳಿ ಆತನನ್ನು ಖುಲಾಸೆಗೊಳಿಸಿದೆ.

ಇದನ್ನೂ ಓದಿ: ಮರಕ್ಕೆ ಸರಪಳಿಯಿಂದ ಬಂಧಿಸಲ್ಪಟ್ಟು ಹಲ್ಲೆಗೀಡಾದ ವ್ಯಕ್ತಿ ಮನೆಯಲ್ಲಿ ಶವವಾಗಿ ಪತ್ತೆ!

Similar News