ಅದಾನಿ ಗ್ರೂಪ್‌ಗೆ ಎಲ್‌ಐಸಿಯ ಸಾಲದಲ್ಲಿ ವಾಪಸ್ ಆಗದಿರಬಹುದಾದ ಮೊತ್ತ ಇಳಿಕೆ

Update: 2023-03-14 17:12 GMT

ಹೊಸದಿಲ್ಲಿ,ಮಾ.14: ಅಮೆರಿಕದ ಹೂಡಿಕೆ ಸಂಸ್ಥೆ ಹಿಂಡನ್‌ಬರ್ಗ್ ರಿಸರ್ಚ್‌ನ ವರದಿಯಿಂದಾಗಿ ಅದಾನಿ ಗ್ರೂಪ್ ಶೇರುಗಳ ಮೌಲ್ಯ ಮಾರುಕಟ್ಟೆಯಲ್ಲಿ ಕುಸಿದಿದ್ದರೂ ಸರಕಾರಿ ಸ್ವಾಮ್ಯದ ಎಲ್‌ಐಸಿಯು ಅದಕ್ಕೆ ನೀಡಿರುವ ಸಾಲದಲ್ಲಿ ಮರುಪಾವತಿಯಾಗದ ಅಪಾಯವನ್ನು ಹೊಂದಿರುವ ಮೊತ್ತದಲ್ಲಿ ಕೊಂಚ ಇಳಿಕೆಯಾಗಿದೆ ಎಂದು ಸರಕಾರವು ಸೋಮವಾರ ಲೋಕಸಭೆಯಲ್ಲಿ ತಿಳಿಸಿದೆ.

ಎಲ್‌ಐಸಿಯು ಅದಾನಿ ಗ್ರೂಪ್‌ಗೆ ನೀಡಿರುವ ಸಾಲದಲ್ಲಿ ಮರುಪಾವತಿಯಾಗದಿರಬಹುದಾದ ಅಪಾಯವನ್ನು ಹೊಂದಿರುವ ಮೊತ್ತವು ಡಿಸೆಂಬರ್‌ನಲ್ಲಿ 6,347 ಕೋ.ರೂ.ಇದ್ದುದು ಮಾರ್ಚ್‌ನಲ್ಲಿ 6,183 ಕೋ.ರೂ.ಗಳಿಗೆ ಇಳಿಕೆಯಾಗಿದೆ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ತಿಳಿಸಿದರು.

ಜ.24ರಂದು ಹಿಂಡನ್‌ಬರ್ಗ್ ವರದಿಯ ಬಿಡುಗಡೆಯ ಬಳಿಕ ಅದಾನಿ ಗ್ರೂಪ್‌ನ ಲಿಸ್ಟೆಡ್ ಕಂಪನಿಗಳು ಸುಮಾರು 145 ಶತಕೋಟಿ ಡಾ.ಗಳಷ್ಟು ಮಾರುಕಟ್ಟೆ ಬಂಡವಾಳವನ್ನು ಕಳೆದುಕೊಂಡಿವೆ. 2020, ಸೆಪ್ಟಂಬರ್‌ನಿಂದ ಅದಾನಿ ಗ್ರೂಪ್ ಕಂಪನಿಗಳಲ್ಲಿ ಎಲ್‌ಐಸಿಯ ಹೂಡಿಕೆಗಳು ಹತ್ತು ಪಟ್ಟು ಹೆಚ್ಚಾಗಿವೆ ಎನ್ನಲಾಗಿದೆ. ಬಿಕ್ಕಟ್ಟಿನಲ್ಲಿರುವ ಅದಾನಿ ಗ್ರೂಪ್‌ನಲ್ಲಿ ಸಂಪೂರ್ಣ ವಿಮಾ ಉದ್ಯಮದ ಹೂಡಿಕೆಗಳಲ್ಲಿ ಶೇ.98ಕ್ಕೂ ಅಧಿಕ ಪಾಲನ್ನು ಎಲ್‌ಐಸಿ ಹೊಂದಿದೆ.

Similar News