ಅದಾನಿ ವಿಷಯದ ಬಗ್ಗೆ ದೂರು ನೀಡಲು ಭಾರೀ ಭದ್ರತೆಯ ನಡುವೆ ಈಡಿ ಕಚೇರಿಗೆ ಮೆರವಣಿಗೆ ನಡೆಸಿದ ವಿರೋಧ ಪಕ್ಷದ ಸಂಸದರು

Update: 2023-03-15 08:05 GMT

ಹೊಸದಿಲ್ಲಿ:ಅದಾನಿ ವಿಷಯದ ಕುರಿತು ಕೇಂದ್ರ ತನಿಖಾ ಸಂಸ್ಥೆಗೆ ದೂರು ನೀಡಲು ಹಲವು ವಿರೋಧ ಪಕ್ಷಗಳ ನಾಯಕರು ಸಂಸತ್ತಿನಿಂದ ದಿಲ್ಲಿಯ ಜಾರಿ ನಿರ್ದೇಶನಾಲಯದ(ಈಡಿ)  ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ. ಅದಾನಿ-ಹಿಂಡನ್ ಬರ್ಗ್ ವಿವಾದದ ಕುರಿತು ತಮ್ಮ ದೂರನ್ನು ಈಡಿಗೆ ಹಸ್ತಾಂತರಿಸಲು ನಿರ್ಧರಿಸಿದ್ದಾರೆ.

18 ವಿರೋಧ ಪಕ್ಷಗಳ ನಾಯಕರು ಈಡಿ ಕಚೇರಿಯ ಹೊರಗೆ ಬೃಹತ್ ಶಕ್ತಿ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ಬಿಜೆಪಿ ಇದನ್ನು ‘ಭ್ರಷ್ಟರ ಯಾತ್ರೆ’ ಎಂದು ಕರೆದಿದೆ.

ಇದಕ್ಕೂ ಮುನ್ನ ಸಂಸತ್ ಭವನದ ಸಂಕೀರ್ಣದಲ್ಲಿರುವ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ನಾಯಕರು ಈ ವಿಷಯದ ಕುರಿತು ಜಂಟಿ ಕಾರ್ಯತಂತ್ರವನ್ನು ಸಂಯೋಜಿಸಲು ಸಭೆ ನಡೆಸಿದರು.

ಅದಾನಿ-ಹಿಂಡೆನ್‌ಬರ್ಗ್ ವಿವಾದದ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.

ಪ್ರತಿಭಟನಾ ಮೆರವಣಿಗೆ ಹಿನ್ನೆಲೆಯಲ್ಲಿ ವಿಜಯ್ ಚೌಕ್ ಹಾಗೂ ಇಡಿ ಕಚೇರಿ ಎದುರು ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಅದಾನಿ ಗುಂಪಿನ ವಿರುದ್ಧದ ಆರೋಪಗಳು ಹಾಗೂ  ಲಂಡನ್‌ನಲ್ಲಿ ರಾಹುಲ್ ಗಾಂಧಿಯವರ ಹೇಳಿಕೆಗಳ ವಿಚಾರದಲ್ಲಿ  ಬಿಜೆಪಿ ಹಾಗೂ  ಪ್ರತಿಪಕ್ಷಗಳ ನಡುವಿನ ಗಲಾಟೆ-ಗದ್ದಲ ಸಂಸತ್ತಿನ ಮೂರನೇ ದಿನವೂ ಮುಂದುವರೆಯಿತು. ಗದ್ದಲದ ನಡುವೆ ಉಭಯ ಸದನಗಳನ್ನು ಬುಧವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಮಂಗಳವಾರ, ಬಿಜೆಪಿ ಸದಸ್ಯರು ಲೋಕಸಭೆಯಲ್ಲಿ ರಾಹುಲ್ ಅವರಿಂದ ಕ್ಷಮೆಯಾಚಿಸುವಂತೆ ಘೋಷಣೆಗಳನ್ನು ಕೂಗಿದ್ದರು, ಆದರೆ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸದ ಸಂದರ್ಭದಲ್ಲಿ ಅವರ ಭಾಷಣಗಳ ಉಲ್ಲೇಖಗಳ ಫಲಕಗಳನ್ನು ಹಿಡಿದರು.

Similar News