×
Ad

'ಎಲಿಫ್ಯಾಂಟ್ ವಿಸ್ಪರರ್ಸ್'ನ ನೈಜ ಹೀರೋಗಳನ್ನು ಸನ್ಮಾನಿಸಿದ ತಮಿಳುನಾಡು ಸಿಎಂ ಸ್ಟಾಲಿನ್

Update: 2023-03-15 21:48 IST

ಚೆನ್ನೈ, ಮಾ. 15: ಆಸ್ಕರ್ ಪ್ರಶಸ್ತಿ ವಿಜೇತ ಕಿರು ಸಾಕ್ಷ್ಯಚಿತ್ರ 'ದಿ ಎಲಿಫ್ಯಾಂಟ್ ವಿಸ್ಪರರ್ಸ್'ನಲ್ಲಿ ಪ್ರಧಾನವಾಗಿ ಕಾಣಿಸಿಕೊಂಡಿರುವ ಬುಡಕಟ್ಟು ದಂಪತಿ ಬೊಮ್ಮನ್ ಮತ್ತು ಬೆಳ್ಳಿ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಬುಧವಾರ ಭೇಟಿಯಾದರು.

ದಂಪತಿಯನ್ನು ಮುಖ್ಯಮಂತ್ರಿ ಸನ್ಮಾನಿಸಿದರು ಹಾಗೂ ಅವರಿಗೆ ತಲಾ ಒಂದು ಲಕ್ಷ ರೂಪಾಯಿ ನಗದು ಪ್ರಶಸ್ತಿಯನ್ನು ಘೋಷಿಸಿದರು. ಅದೇ ವೇಳೆ, ರಾಜ್ಯದಲ್ಲಿರುವ ಎರಡು ಆನೆ ಶಿಬಿರಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ 91 ಕೆಲಸಗಾರರಿಗೆ ತಲಾ ಒಂದು ಲಕ್ಷ ರೂಪಾಯಿ ನೆರವು ಘೋಷಿಸಿದರು. ಇದರ ಜೊತೆಗೆ, ಆನೆ ಶಿಬಿರಗಳ ಕೆಲಸಗಾರರಿಗೆ ಪರಿಸರಸ್ನೇಹಿ ಮತ್ತು ಸಾಂಸ್ಕøತಿಕವಾಗಿ ಪೂರಕವಾಗಿರುವ ಮನೆಗಳನ್ನು ನೀಡಲಾಗುವುದು ಎಂಬುದಾಗಿಯೂ ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಘೋಷಿಸಿದರು. ಕೊಯಂಬತೋರ್‍ನಲ್ಲಿ ಹೊಸ ಆನೆ ಶಿಬಿರವೊಂದನ್ನು ಸ್ಥಾಪಿಸಲಾಗುವುದು ಎಂಬುದಾಗಿಯೂ ಅವರು ಪ್ರಕಟಿಸಿದರು.

"ತಮಿಳುನಾಡು ಅರಣ್ಯ ಇಲಾಖೆಯು ಆನೆಗಳ ಬಗ್ಗೆ ವಹಿಸುವ ಕಾಳಜಿಯ ಬಗ್ಗೆ ಈ ಚಿತ್ರವು ಜಗತ್ತಿನ ಗಮನವನ್ನು ಸೆಳೆದಿದೆ'' ಎಂದು ಸ್ಟಾಲಿನ್ ಅಭಿಪ್ರಾಯಪಟ್ಟರು.

ಗುಂಪಿನಿಂದ ಪರಿತ್ಯಕ್ತಗೊಂಡ ಅನಾತ ಆನೆ ಮರಿ ರಘುವನ್ನು ನೀಲಗಿರೀಸ್‍ನ ಮುಡುಮಲೈಕಾಡಿನಲ್ಲಿ ವಾಸಿಸುತ್ತಿರುವ ಕಟ್ಟುನಾಯಕನ್ ಬುಡಕಟ್ಟು ಪಂಗಡದ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಯಾವ ರೀತಿ ಆರೈಕೆ ಮಾಡುತ್ತಿದ್ದಾರೆ ಎನ್ನುವ ಕತೆಯನ್ನು ಈ ಕಿರುಚಿತ್ರ ಹೇಳುತ್ತದೆ.

ಕಾರ್ತಿಕಿ ಗೊನ್ವಾಲ್ವಿಸ್ ನಿರ್ದೇಶಿಸಿರುವ ಮತ್ತು ಗುನೀತ್ ಮೊಂಗ ನಿರ್ಮಿಸಿರುವ 40 ನಿಮಿಷಗಳ ಸಾಕ್ಷ್ಯಚಿತ್ರವು, ಆನೆ ಮರಿ ಮತ್ತು ದಂಪತಿಯ ನಡುವೆ ಬೆಳೆದ ಬಾಂಧವ್ಯವನ್ನು ಮುಖ್ಯವಾಗಿ ಎತ್ತಿತೋರಿಸುತ್ತದೆ.

ಆನೆ ನೋಡಲು ಸಾಲುಗಟ್ಟಿರುವ ಪ್ರವಾಸಿಗರು!

'ಎಲಿಫ್ಯಾಂಟ್ ವಿಸ್ಪರರ್ಸ್' ಆಸ್ಕರ್ ಪ್ರಶಸ್ತಿ ಗೆದ್ದ ಬಳಿಕ, ಕಿರು ಸಾಕ್ಷ್ಯಚಿತ್ರದ ಪ್ರಧಾನ ಆಕರ್ಷಣೆ ಮರಿಯಾನೆಯನ್ನು ನೋಡಲು ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಮುಡುಮಲೈ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡುತ್ತಿದ್ದಾರೆ.

Similar News