ನರೇಗಾ ಬಜೆಟ್‌ನಲ್ಲಿ ತೀವ್ರ ಕಡಿತಕ್ಕೆ ಸಂಸದೀಯ ಸಮಿತಿಯ ಕಳವಳ

Update: 2023-03-15 17:42 GMT

ಹೊಸದಿಲ್ಲಿ,ಮಾ.15: ಕೇಂದ್ರ ಮುಂಗಡಪತ್ರದಲ್ಲಿ ನರೇಗಾ ಯೋಜನೆಗೆ ಹಣ ಹಂಚಿಕೆಯನ್ನು ತೀವ್ರವಾಗಿ ಕಡಿತಗೊಳಿಸಿರುವುದನ್ನು ತನ್ನ ವರದಿಯಲ್ಲಿ ಗಮನಕ್ಕೆ ತೆಗೆದುಕೊಂಡಿರುವ ಗ್ರಾಮೀಣಾಭಿವೃದ್ಧಿ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ದೇಶದ ಜನತೆಯು ಸಂಕಷ್ಟದಲ್ಲಿರುವಾಗ ಯೋಜನೆಯ ಪ್ರಮುಖ ಪಾತ್ರವನ್ನು ಪರಿಗಣಿಸಿ,ಹಣ ಕಡಿತದ ಹಿಂದಿನ ತಾರ್ಕಿಕತೆಯೇನು ಎಂದು ಸರಕಾರವನ್ನು ಪ್ರಶ್ನಿಸಿದೆ.

2022-23ರ ಪರಿಷ್ಕೃತ ಅಂದಾಜಿಗೆ ಹೋಲಿಸಿದರೆ 2023-24ನೇ ವಿತ್ತವರ್ಷಕ್ಕೆ ನರೇಗಾ ಯೋಜನೆಗಾಗಿ ಬಜೆಟ್ ಅಂದಾಜನ್ನು 29,400 ಕೋ.ರೂ.ಗಳಷ್ಟು ತಗ್ಗಿಸಲಾಗಿದೆ.

ತಮ್ಮ ಮತ್ತು ತಮ್ಮ ಕುಟುಂಬ ಸದಸ್ಯರ ಹೊಟ್ಟೆಯನ್ನು ಹೊರೆಯಲು ಬೇರೆ ಯಾವುದೇ ಮಾರ್ಗವಿಲ್ಲದ ನಿರುದ್ಯೋಗಿ ಜನರಿಗೆ ನರೇಗಾ ಕೊನೆಯ ಆಧಾರವಾಗಿದೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ನರೇಗಾದ ಪಾತ್ರ ಮತ್ತು ಮಹತ್ವ ಸ್ಪಷ್ಟವಾಗಿ ಗೋಚರಿಸಿತ್ತು,ಆಗ ಅದು ಸಂಕಷ್ಟದಲ್ಲಿರುವ ಜನರ ಪಾಲಿಗೆ ಆಶಾಕಿರಣವಾಗಿತ್ತು ಎಂದು ಡಿಎಂಕೆ ಸಂಸದೆ ಕೆ.ಕನಿಮೋಳಿ ನೇತೃತ್ವದ ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ.

ಸಾಂಕ್ರಾಮಿಕದ ಸಮಯದಲ್ಲಿ ಸರಕಾರವು 2020-21ನೇ ಸಾಲಿಗೆ ಆರಂಭದಲ್ಲಿ ಹಂಚಿಕೆ ಮಾಡಲಾಗಿದ್ದ 61,500 ಕೋ.ರೂ.ಗಳಿಂದ 1,11,500 ಕೋ.ರೂ.ಗಳಿಗೆ ಪರಿಷ್ಕೃತಗೊಳಿಸುವಂತಾಗಿತ್ತು. ಇದೇ ರೀತಿ 2021-22ರಲ್ಲಿ ನರೇಗಾ ಹಂಚಿಕೆಯನ್ನು 73,000 ಕೋ.ರೂ.ಗಳಿಂದ 99,117.53 ಕೋ.ರೂ.ಗಳಿಗೆ ಹೆಚ್ಚಿಸಲಾಗಿತ್ತು. ಇದು ನರೇಗಾ ಯೋಜನೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಹಾಲಿ ಹಣಕಾಸು ವರ್ಷದಲ್ಲಿಯೂ ಯೋಜನೆಗೆ ಆರಂಭದಲ್ಲಿ 73,000 ಕೋ.ರೂ.ಗಳನ್ನು ಹಂಚಿಕೆ ಮಾಡಲಾಗಿತ್ತಾದರೂ ನಂತರ ಅದನ್ನು 89,400 ಕೋ.ರೂ.ಗಳಿಗೆ ಹೆಚ್ಚಿಸಲಾಗಿದೆ.

ನರೇಗಾ ಯೋಜನೆಯಡಿ ಹಣದ ಕಡಿಮೆ ಹಂಚಿಕೆಯ ತಾರ್ಕಿಕತೆಯನ್ನು ಅರ್ಥ ಮಾಡಿಕೊಳ್ಳಲು ಸಮಿತಿಗೆ ಸಾಧ್ಯವಾಗಿಲ್ಲ ಎಂದು ಹೇಳಿರುವ ವರದಿಯು,ರಾಜ್ಯ ಸರಕಾರಗಳಿಗೆ ವೇತನ ಪಾವತಿ ಮತ್ತು ಸಾಮಗ್ರಿ ನಿಧಿ ಬಿಡುಗಡೆಯಲ್ಲಿ ವಿಳಂಬದ ಕುರಿತೂ ಕಳವಳಗಳನ್ನು ವ್ಯಕ್ತಪಡಿಸಿದೆ. 

Similar News