ಕಾಶ್ಮೀರ: ಮಾಧ್ಯಮ ನಿರ್ಬಂಧದ ಕುರಿತ ಕಾರ್ಯಕ್ರಮ ಅನುಮತಿ ನಿರಾಕರಿಸಿದ ಪೊಲೀಸರು

Update: 2023-03-15 18:24 GMT

ಶ್ರೀನಗರ, ಮಾ. 15: ಕಾಶ್ಮೀರದಲ್ಲಿ ಮಾಧ್ಯಮ ನಿರ್ಬಂಧದ ಕುರಿತು ಚರ್ಚಿಸುವ ಕಾರ್ಯಕ್ರಮಕ್ಕೆ ದಿಲ್ಲಿ ಪೊಲೀಸರು ಬುಧವಾರ ಅನುಮತಿ ನಿರಾಕರಿಸಿದ್ದಾರೆ. 

‘‘ಕಾಶ್ಮೀರದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹಾಗೂ ರಾಜ್ಯದ ದಮನ’’ ವಿಷಯದ ಕುರಿತ ಕಾರ್ಯಕ್ರಮವನ್ನು ಗಾಂಧಿ ಪೀಸ್ ಫೌಂಡೇಶನ್‌ನಲ್ಲಿ ಬುಧವಾರ ಅಪರಾಹ್ನ 2 ಗಂಟೆಗೆ ಆಯೋಜಿಸಲಾಗಿತ್ತು. 

ಜಮ್ಮು ಹಾಗೂ ಕಾಶ್ಮೀರ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹಸ್ನೈನ್ ಮಸೂದಿ, ಸಿಪಿಐ (ಎಂ) ನಾಯಕ ಎಂ.ವೈ. ತರಿಗಮಿ, ಚಿತ್ರ ನಿರ್ದೇಶಕ ಸಂಜಯ್ ಕಾಕ್, ಯುನೈಟೆಡ್ ಪೀಸ್ ಅಲಯನ್ಸ್‌ನ ಮಿರ್  ಶಾಹಿದ್ ಸಲೀಮ್ ಹಾಗೂ ದಿಲ್ಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ನಂದಿತಾ ನರೈನ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದರು.  ಈ ಕಾರ್ಯಕ್ರಮವನ್ನು ಅನಾಮಿಕ ಗುಂಪು ಆಯೋಜಿಸಿದೆ. ಇದರ ಸದಸ್ಯರ ಕುರಿತ ಮಾಹಿತಿ ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಪೊಲೀಸರು ಕಾರ್ಯಕ್ರಮ ನಡೆಯಲಿದ್ದ ಗಾಂಧಿ ಪೀಸ್ ಫೌಂಡೇಶನ್‌ನ ಒಂದು ಗೇಟಿಗೆ ಬೀಗ ಹಾಕಿದ್ದಾರೆ. ಇನ್ನೊಂದು ಗೇಟ್ ಬಳಿ  ತಡೆ ಗೋಡೆ ನಿರ್ಮಿಸಿದ್ದಾರೆ ಎಂದು ನಾಗರಿಕ ಹಕ್ಕು ಹೋರಾಟಗಾರ ದೀಪಕ್ ಕುಮಾರ್ ಅವರು ತಿಳಿಸಿದ್ದಾರೆ. 
ಮಾನವ ಹಕ್ಕುಗಳ ಉಲ್ಲಂಘನೆಯ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ರಮಗಳು ಹಾಗೂ ಪ್ರತಿಭಟನೆಗಳನ್ನು ನಿರ್ಬಂಧಿಸುವ ಸರಕಾರದ ಹಾಗೂ ಪೊಲೀಸರ ಪ್ರಯತ್ನ ಮಂದುವರಿದಿದೆ ಎಂದು ಮಿರ್ ಶಾಹಿದ್ ಸಲೀಂ ತಿಳಿಸಿದ್ದಾರೆ.

Similar News