ಶಿರಾಡಿ: ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

Update: 2023-03-16 13:49 GMT

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿಯಿಂದಾಗಿ ಶಿರಾಡಿ ಮತ್ತು ಅಡ್ಡಹೊಳಿಯಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಮಾಡದೆ ಇರುವ ಬಗ್ಗೆ ಹಲವು ಸಮಸ್ಯೆಗಳನ್ನು ಮುಂದಿಟ್ಟು, ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಿರಾಡಿಯಲ್ಲಿ ಮಾ. 16ರಂದು ಗ್ರಾಮಸ್ಥರಿಂದ ಪ್ರತಿಭಟನೆ ನಡೆಯಿತು.

ಶಿರಾಡಿ ಪೇಟೆಯಲ್ಲಿ ಜಮಾಯಿಸಿದ ಪತ್ರಿಭಟನಾಕಾರರು ಶಿರಾಡಿ ಗ್ರಾಮ ಪಂ. ವ್ಯಾಪ್ತಿಯಲ್ಲಿ ಹಾದು ಹೋಗುವ ಚತುಷ್ಪಥ ಕಾಮಗಾರಿಯಿಂದಾಗಿ ಶಿರಾಡಿ ಮತ್ತು ಅಡ್ಡಹೊಳಿ ಮಧ್ಯೆ ಸಂಪರ್ಕ ರಸ್ತೆ ಇಲ್ಲದೆ ಹಲವಾರು ಸಮಸ್ಯೆಗಳು ಎದುರಿಸುವಂತಾಗಿದೆ. ಈ ಬಗ್ಗೆ ಹಲವು ಬಾರಿ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಈ ಭಾಗದ ಜನತೆ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಮತ್ತು ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ಶಿರಾಡಿಯಲ್ಲಿ ಸಾರ್ವಜನಿಕ ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಚಿಕಿತ್ಸಾ ಕೇಂದ್ರ,  ಎರಡು ಪೆಟ್ರೋಲ್ ಬಂಕ್, ಸಾರ್ವಜನಿಕ ಗ್ರಂಥಾಲಯ, ಹಿರಿಯ ಪ್ರಾಥಮಿಕ ಶಾಲೆ, 2 ಅಂಗನವಾಡಿ ಕೇಂದ್ರ, 3 ಚರ್ಚ್, 1 ದೇವಸ್ಥಾನ, ಎಸ್.ಬಿ.ಐ. ಬೇಂಕ್, ಸಹಕಾರಿ ಬೇಂಕ್, ಹಾಲು ಉತ್ಪಾದಕರ ಸಂಘ ಮೊದಲಾದ ಸಂಸ್ಥೆಗಳು ಶಿರಾಡಿ ಪೇಟೆಯಲ್ಲಿ ಕಾರ್ಯಾಚರಿಸುತ್ತಿದ್ದು, 5 ಗ್ರಾಮ ವ್ಯಾಪ್ತಿಯಿಂದ ಶಿರಾಡಿ ಪೇಟೆಗೆ ದಿನನಿತ್ಯ ಸಾವಿರಾರು ಮಂದಿಯ ಸಂಪರ್ಕ ಕೇಂದ್ರವಾಗಿರುತ್ತದೆ. ಆದರೆ ಶಿರಾಡಿಯಲ್ಲಿ ಸರ್ವೀಸ್ ರಸ್ತೆ ಇಲ್ಲದಾಗಿ  ಗ್ರಾಮಸ್ಥರಿಗೆ ಶಿರಾಡಿ ಪೇಟೆಯ ಸಂಪರ್ಕವೇ ಇಲ್ಲದಂತಾಗುತ್ತಿದೆ. ಅಡ್ಡಹೊಳಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಬಳಿಯಲ್ಲಿ ತಡೆಗೋಡೆ ನಿರ್ಮಾಣ, ಚರ್ಚ್‍ಗೆ ಹೋಗುವ ರಸ್ತೆಗೆ ತಡೆಗೋಡೆ ನಿರ್ಮಾಣ, ಅಯ್ಯಪ್ಪ ಸ್ವಾಮಿ ದೇವಸ್ಥಾನ ಹೋಗುವ ರಸ್ತೆಗೆ ಸಂಪರ್ಕ ರಸ್ತೆ, ಉದನೆಯಲ್ಲಿ ಹೆದ್ದಾರಿ ಪಕ್ಕದಲ್ಲಿ ಪ್ರೌಢ ಶಾಲೆಯಲ್ಲಿ ಸುಮಾರು 800 ಮಕ್ಕಳು ಇದ್ದು, ಇಲ್ಲಿ ಎದುರಾಗುವ ಅಪಾಯವನ್ನು ತಡೆಗಟ್ಟುವ ಸಲುವಾಗಿ ತಡೆಗೋಡೆ ನಿರ್ಮಾಣ ಮಾಡಬೇಕು ಮೊದಲಾದ ಬೇಡಿಕೆಯನ್ನು ಮುಂದಿಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪಂ. ಮಾಜಿ ಸದಸ್ಯರಾದ ಪಿ.ಪಿ. ವರ್ಗೀಸ್, ಸರ್ವೊತ್ತಮ ಗೌಡ, ಶಿರಾಡಿ ಚರ್ಚ್ ಧರ್ಮಗುರು ಹನಿ ಜೇಕಬ್, ನಿವೃತ್ತ ಶಿಕ್ಷಕ ಚಾಕೋ ವರ್ಗಿಸ್, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ರೈ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಆಶಾ ಲಕ್ಷ್ಮಣ, ಶಿರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನಿತಾ ತಂಗಚ್ಚನ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಕೆ. ಪೌಲೋಸ್ ಮಾತನಾಡಿದರು.

ಪ್ರತಿಭಟನಾ ಸ್ಥಳಕ್ಕೆ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡ ಭೇಟಿ ನೀಡಿದ್ದು, ಪ್ರತಿಭಟನಾ ನಿರತ ಮುಖಂಡರೊಂದಿಗೆ ಸಮಸ್ಯೆಗಳಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರತಿಭಟನಾಕಾರರ ಜೊತೆ ಮಾತನಾಡಿ "ಶಿರಾಡಿ ಗ್ರಾಮ ಪ್ರದೇಶ ಪಶ್ಚಿಮ ಘಟ್ಟ ಪ್ರದೇಶವಾಗಿರುತ್ತದೆ, ಈ ಭಾಗದಲ್ಲಿ ರಸ್ತೆಯಿಂದ 30 ಅಡಿಗಿಂತ ಅಧಿಕ ಜಾಗ ಸ್ವಾಧೀನ ಪಡಿಸಲು ಅವಕಾಶ ಇರುವುದಿಲ್ಲ, ರಸ್ತೆ ಹಾದು ಹೋಗುವಲ್ಲಿ ಸ್ಥಳೀಯರು ಜಾಗ ಬಿಟ್ಟುಕೊಟ್ಟಲ್ಲಿ ಸಂಪರ್ಕ ರಸ್ತೆ ನಿರ್ಮಿಸಲು ಪ್ರಯತ್ನಿಸಲಾಗುವುದು", ಉಳಿದಂತೆ ತಮ್ಮ ಬೇಡಿಕೆಯ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಹೆದ್ದಾರಿ ಪ್ರಾಧಿಕಾರದ ಸಾಯಿರಾಮ್, ಭೂಸ್ವಾಧೀನಾಧಿಕಾರಿ ಮಂಜುನಾಥ ಇದ್ದರು.

Similar News