ವಿಚಾರಣೆ ಮುಂದೂಡುವಂತೆ ಈ.ಡಿ.ಗೆ ಕವಿತಾ ಪತ್ರ: ತನಿಖೆ ನ್ಯಾಯಯುತವಾಗಿಲ್ಲವೆಂದು ಆರೋಪ
ಹೊಸದಿಲ್ಲಿ,ಮಾ.16: ದಿಲ್ಲಿ ಸರಕಾರದ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ತನ್ನ ವಿಚಾರಣೆಯನ್ನು ಮುಂದೂಡಬೇಕೆಂದು ಆಗ್ರಹಿಸಿ ಭಾರತ ರಾಷ್ಟ್ರೀಯ ಸಮಿತಿ ಪಕ್ಷದ ನಾಯಕಿ ಕೆ. ಕವಿತಾ ಅವರು ಜಾರಿ ನಿರ್ದೇಶನಾಲಯ(ಈ.ಡಿ)ಕ್ಕೆ ಗುರುವಾರ ಪತ್ರ ಬರೆದಿದ್ದಾರೆ.ಕೇಂದ್ರೀಯ ತನಿಖಾ ಸಂಸ್ಥೆಗಳು ತನಗೆ ಸಮನ್ಸ್ ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ತಾನು ಸಲ್ಲಿಸಿರುವ ಅರ್ಜಿಯು ಅಲಿಕೆಗೆೆ ಬಾಕಿಯಿರುವುದರಿಂದ, ತನ್ನ ವಿಚಾರಣೆಯನ್ನು ಮುಂದೂಡಬೇಕೆಂದು ಅವರು ಪತ್ರದಲ್ಲಿ ಈ.ಡಿ.ಯನ್ನು ಕೋರಿದ್ದಾರೆ.
ತನ್ನನ್ನು ಪ್ರಶ್ನಿಸಲು ಜಾರಿ ನಿರ್ದೇಶನಾಲಯವು ನೀಡಿರುವ ಸಮನ್ಸ್ ರದ್ದುಪಡಿಸಬೇಕೆಂದು ಕೋರಿ ಕೆ. ಕವಿತಾ ಅವರು ಬುಧವಾರ ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದರು. ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಕವಿತಾರ ಅರ್ಜಿಯನ್ನು ಮಾರ್ಚ್ 24ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದ್ದಾರೆ. ಕವಿತಾ ಅವರು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರಿ ಹಾಗೂ ಭಾರತ ರಾಷ್ಟ್ರ ಸಮಿತಿ ಪಕ್ಷದ ನಾಯಕಿಯಾಗಿದ್ದಾರೆ.
ದಿಲ್ಲಿ ಸರಕಾರದ ಅಬಕಾರಿ ನೀತಿ ಹಗರಣಕ್ಕೆ ಕುರಿತು ನಿರ್ದೇಶನಾಲಯದ ಅಧಿಕಾರಿಗಳು ನಡೆಸುತ್ತಿರುವ ತನಿಖೆಗೆ ಸಂಬಂಧಿಸಿದ ವಿಚಾರಣೆಗೆ ಕೆ.ಕವಿತಾ ಹಾಜರಾಗಿಲ್ಲ. ತನ್ನ ಬದಲಿಗೆ ಪಕ್ಷದ ನಾಯಕ ಸೋಮ ಭರತ್ ಕುಮಾರ್ ಅವರನ್ನು ಆರು ಪುಟಗಳ ಪತ್ರದೊಂದಿಗೆ ನಿರ್ದೇಶನಾಲಯಕ್ಕೆ ಕಳುಹಿಸಿದ್ದರು.
ಈಗ ರದ್ದುಪಡಿಸಲಾಗಿರುವ ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಕಪ್ಪುಹಣ ಬಿಳುಪು ಪ್ರಕರಣದಲ್ಲಿ ಕವಿತಾ ಅವರನ್ನು ಜಾರಿ ನಿರ್ದೇಶನಾಲಯ ಪ್ರಶ್ನಿಸಲು ನಿರ್ಧರಿಸಿದೆ. ಆದರೆ ಇ.ಡಿ.ವಿಚಾರಣೆಯನ್ನು ಕವಿತಾ ವಿರೋಧಿಸಿದ್ದಾರೆ. ಪ್ರಕರಣದ ಬಗ್ಗೆ ಮುಕ್ತ, ನ್ಯಾಯಸಮ್ಮತ ಅಥವಾ ಪಕ್ಷಪಾತರಹಿತ ತನಿಖೆ ನಡೆಯುವುದೆಂಬ ತನ್ನ ನಿರೀಕ್ಷೆ ಹುಸಿಯಾಗಿದೆ ಎಂದು ಆಕೆ ಹೇಳಿದ್ದರು.