ಮೋದಿ ನೇತೃತ್ವದ ಭಾರತದ ಕುರಿತು ಮಾತನಾಡಲು ಆಕ್ಸ್‌ಫರ್ಡ್ ನೀಡಿದ್ದ ಆಹ್ವಾನ ತಿರಸ್ಕರಿಸಿದ ವರುಣ್ ಗಾಂಧಿ
ಹೊಸದಿಲ್ಲಿ,ಮಾ.14: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಸರಿಯಾದ ದಾರಿಯಲ್ಲಿ ಸಾಗುತ್ತಿದೆಯೇ ಎನ್ನುವುದರ ಕುರಿತು ಚರ್ಚೆಯಲ್ಲಿ ಮಾತನಾಡಲು ಬ್ರಿಟನ್ ನ ಆಕ್ಸ್ಫರ್ಡ್ ಯೂನಿಯನ್ ನ ಆಹ್ವಾನವನ್ನು ಬಿಜೆಪಿ ಸಂಸದ ವರುಣ ಗಾಂಧಿ ತಿರಸ್ಕರಿಸಿದ್ದಾರೆ.
ಅಂತರರಾಷ್ಟ್ರೀಯ ವೇದಿಕೆಯಲ್ಲಿ ದೇಶದ ಸವಾಲುಗಳ ಕುರಿತು ಮಾತನಾಡುವಲ್ಲಿ ಯಾವುದೇ ಹುರುಳು ಅಥವಾ ಋಜುತ್ವ ತನಗೆ ಕಂಡು ಬರುತ್ತಿಲ್ಲ ಮತ್ತು ಅಂತಹ ಹೆಜ್ಜೆಯು ಅಗೌರವದ ಕೃತ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
‘ಮೋದಿಯವರ ಭಾರತವು ಸರಿಯಾದ ದಾರಿಯಲ್ಲಿದೆ ಎನ್ನುವುದನ್ನು ಈ ಸದನವು ನಂಬುತ್ತದೆ ’ ಎಂಬ ನಿರ್ಣಯದ ವಿರುದ್ಧ ವರುಣ್ ಗಾಂಧಿ ಮಾತನಾಡಬೇಕೆಂದು ಆಕ್ಸ್ಫರ್ಡ್ ಯೂನಿಯನ್ ಬಯಸಿದ್ದರಿಂದ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ವರುಣ ಗಾಂಧಿ ಆಗಾಗ್ಗೆ ಬಿಜೆಪಿ ನೇತೃತ್ವದ ಕೇಂದ್ರದ ನೀತಿಗಳನ್ನು ಟೀಕಿಸುತ್ತಿರುತ್ತಾರೆ ಎನ್ನುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.
ವರುಣ್ ಗಾಂಧಿಯವರ ಸೋದರ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಲಂಡನ್ನಲ್ಲಿ ನೀಡಿದ್ದ ಹೇಳಿಕೆಗಳ ಕುರಿತು ವಿವಾದ ಸೃಷ್ಟಿಯಾಗಿರುವ ಸಮಯದಲ್ಲಿಯೇ ಈ ಬೆಳವಣಿಗೆ ನಡೆದಿದೆ. ಎಪ್ರಿಲ್ ಮತ್ತು ಜೂನ್ ನಡುವೆ ನಡೆಯಲಿರುವ ಚರ್ಚೆಗೆ ವರುಣ ಗಾಂಧಿಗೆ ಆಹ್ವಾನವನ್ನು ಯುನಿಯನ್ ಅಧ್ಯಕ್ಷ ಮ್ಯಾಥ್ಯೂ ಡಿಕ್ ಪರವಾಗಿ ನೀಡಲಾಗಿತ್ತು.
ಯೂನಿಯನ್ಗೆ ನೀಡಿರುವ ಉತ್ತರದಲ್ಲಿ ವರುಣ ಗಾಂಧಿ, ತನ್ನಂತಹ ಪ್ರಜೆಗಳಿಗೆ ಭಾರತದಲ್ಲಿ ಇಂತಹ ವಿಷಯಗಳನ್ನು ಸುಲಭವಾಗಿ ಚರ್ಚಿಸಲು ಅವಕಾಶವಿದೆ,ಸಾರ್ವಜನಿಕವಾಗಿ ಮತ್ತು ಸಂಸತ್ತಿನಲ್ಲಿಯೂ ಸರಕಾರದ ನೀತಿಗಳನ್ನು ಟೀಕಿಸಬಹುದಾಗಿದೆ. ಆದರೆ ನೀತಿ ನಿರೂಪಕರ ವಿರುದ್ಧ ಭಾರತದೊಳಗೆ ಮಾತ್ರ ಟೀಕೆಗಳನ್ನು ಮಾಡಬೇಕು ಮತ್ತು ಅವುಗಳನ್ನು ವಿದೇಶಗಳ ನೆಲದಲ್ಲಿ ಮಾಡುವುದು ದೇಶದ ಹಿತಾಸಕ್ತಿಗೆ ಹಾನಿಕಾರಕವಾಗುತ್ತದೆ ಮತ್ತು ಅಗೌರವದ ಕೃತ್ಯವಾಗುತ್ತದೆ ಎಂದು ಹೇಳಿದ್ದಾರೆ.
ತನ್ನಂತಹ ರಾಜಕಾರಣಿಗಳು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಪ್ರತ್ಯೇಕ ನೀತಿಗಳ ಬಗ್ಗೆ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು,ಆದರೆ ಭಾರತದ ಏಳಿಗೆಯ ವಿಷಯದಲ್ಲಿ ಅವರೆಲ್ಲ ಒಂದೇ ದಾರಿಯಲ್ಲಿ ಜೊತೆಯಾಗಿರುತ್ತಾರೆ ಎಂದೂ ಅವರು ತಿಳಿಸಿದ್ದಾರೆ.
ಪ್ರಧಾನಿ ಮೋದಿಯವರ ಆಡಳಿತವು ಭಾರತವನ್ನು ಜಾಗತಿಕ ರಂಗದಲ್ಲಿ ಮುನ್ನೆಲೆಗೆ ತಂದಿದೆ ಮತ್ತು ಅನೇಕರು ಅವರ ನೀತಿ ಕಾರ್ಯಸೂಚಿಗಳನ್ನು ಸದೃಢ ಆರ್ಥಿಕ ಬೆಳವಣಿಗೆ,ಭ್ರಷ್ಟಾಚಾರ ನಿಗ್ರಹ ಮತ್ತು ಭಾರತವು ಮೊದಲು ಎನ್ನುವುದರೊಂದಿಗೆ ಸಮೀಕರಿಸಿದ್ದಾರೆ. ಇನ್ನೊಂದೆಡೆ,ಕೃಷಿ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಅತೃಪ್ತಿಯ ತಪ್ಪು ನಿರ್ವಹಣೆ,ಧಾರ್ಮಿಕ ಗುಂಪುಗಳ ನಡುವೆ ಸಂಘರ್ಷಕ್ಕೆ ಪ್ರಚೋದನೆ ಹಾಗೂ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಪುನರುಜ್ಜೀವನದಲ್ಲಿ ವೈಫಲ್ಯಕ್ಕಾಗಿ ಮೋದಿ ಆಡಳಿತವನ್ನು ಟೀಕಿಸಲಾಗುತ್ತಿದೆ ಎಂದು ಹೇಳಿರುವ ಆಹ್ವಾನ ಪತ್ರವು, ಮತದಾರರಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಜನಪ್ರಿಯತೆಯ ಹಿನ್ನೆಲೆಯಲ್ಲಿ ಮೋದಿಯವರ ನೇತೃತ್ವದಡಿ ಬಿಜೆಪಿಯ ಮಾರ್ಗವು ಏಕೀಕರಣಕ್ಕಿಂತ ಹೆಚ್ಚು ಧ್ರುವೀಕರಣದತ್ತ ಸಾಗುತ್ತಿದೆಯೇ ಎನ್ನುವುದನ್ನು ಚರ್ಚಿಸುವುದು ಅನಿವಾರ್ಯವಾಗಿದೆ. ಆಗ ‘ಭಾರತವು ಭವಿಷ್ಯದಲ್ಲಿ ಮುನ್ನುಗ್ಗುತ್ತಿರುವಾಗ ಅದಕ್ಕೆ ಸರಿಯಾದ ಮಾರ್ಗ ಯಾವುದು (ಅಥವಾ ಯಾರು)’ ಎನ್ನುವುದು ಪ್ರಶ್ನೆಯಾಗುತ್ತದೆ ಎಂದು ಹೇಳಿದೆ.