ಬೇಸಿಗೆಯಲ್ಲಿ ಪ್ರಾಣಿ-ಪಕ್ಷಿಗಳ ದಾಹ ನೀಗಿಸೋಣ

Update: 2023-03-17 06:12 GMT

ಬಳ್ಳಾರಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗ ಬಿಸಿಲಿನ ತಾಪ ಹೆಚ್ಚಾಗಿ ನೀರಿಗೆ ಹಾಹಾಕಾರ ಉಂಟಾಗಿದ್ದು, ಮನುಷ್ಯರು ಮಾತ್ರವಲ್ಲ, ಪ್ರಾಣಿ-ಪಕ್ಷಿ ಸಂಕುಲಗಳು ಜೀವಜಲಕ್ಕಾಗಿ ಪರದಾಡುವ ಪರಿಸ್ಥಿತಿ ಹೆಚ್ಚಾಗಿದೆ.

ಮಾರ್ಚ್, ಎಪ್ರಿಲ್, ಮೇ ಈ ಮೂರು ತಿಂಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುತ್ತದೆ. ಅಷ್ಟೇ ಅಲ್ಲ ಈ ತಿಂಗಳಲ್ಲಿ ಜಲಮೂಲಗಳು, ಕೆರೆ ಕಟ್ಟೆಗಳು ಬರಿದಾಗುತ್ತಿದ್ದು, ಪ್ರಾಣಿ, ಪಕ್ಷಿಗಳು ಬಿಸಿಲಿನ ಬೇಗೆ ತಾಳಲಾರದೆ, ಸರಿಯಾಗಿ ನೀರು ಸಿಗದೆ ನಿತ್ರಾಣಗೊಂಡು ಸಾಯುತ್ತವೆ.

ಮಾರ್ಚ್‌ಗಿಂತ ಎಪ್ರಿಲ್ ತಿಂಗಳಲ್ಲಿ ಸೂರ್ಯನ ಪ್ರಖರತೆ ಮತ್ತಷ್ಟು ಹೆಚ್ಚಾಗಿರುತ್ತದೆ. ಹೀಗಾಗಿ ಈ ಬಿಸಿಲಿನ ತಾಪಕ್ಕೆ ಬಾಯಾರಿ ಪ್ರಾಣಿ ಪಕ್ಷಿಗಳು ನಿತ್ರಾಣಗೊಂಡು ನೆಲಕ್ಕೆ ಬಿದ್ದು ಸಾಯುತ್ತವೆ. ಕಾಗೆ, ಗುಬ್ಬಿ, ಪಾರಿವಾಳ, ಹದ್ದು ಮುಂತಾದ ಪಕ್ಷಿಗಳಲ್ಲದೆ ನಾಯಿ, ಅಳಿಲು, ಬೆಕ್ಕು ಹಾಗೂ ಕೋತಿಗಳು ಕೂಡಾ ಬಿಸಿಲಿನ ತಾಪಕ್ಕೆ ನಲುಗಿ ಮೂರ್ಛೆ ತಪ್ಪುತ್ತವೆ. 

ಈ ಅನಾಹುತ ತಪ್ಪಿಸಬೇಕು ಎಂದರೆ ನಾವು ಸಾರ್ವಜನಿಕರು ಮರಗಳ ಕೆಳಗೆ, ಮನೆಯ ಅಂಗಳದಲ್ಲಿ ಅಥವಾ ಅಂಗಡಿಗಳ ಬಳಿ ನೀರಿನ ಬಟ್ಟಲುಗಳನ್ನು ಇಟ್ಟು ಮಾನವೀಯತೆ ಮೆರೆಯಬೇಕಾಗಿದೆ. ಅಲ್ಲದೆ ಸಾರ್ವಜನಿಕ ಪಾರ್ಕ್‌ಗಳಲ್ಲಿಯೂ ಪ್ರಾಣಿ, ಪಕ್ಷಿಗಳಿಗೆ ನೀರಿನ ದಾಹ ತೀರಿಸಲು ನೀರಿನ ತೊಟ್ಟಿಗಳನ್ನು ಅಳವಡಿಸಬೇಕು. 
ನೀರಿನ ದಾಹ ತಣಿಸುವುಲ್ಲದೆ ಪ್ರಾಣಿ, ಪಕ್ಷಿಗಳಿಗೆ ಅಲ್ಲಲ್ಲಿ ಒಂದಿಷ್ಟು ಆಹಾರವನ್ನೂ ಇಟ್ಟರೆ ಅವುಗಳು ಬದುಕಿಕೊಳ್ಳುತ್ತವೆ.

ಬಿಸಿಲಿನ ತಾಪ ಹೆಚ್ಚಳದ ಜೊತೆಗೆ ಈಗಿನ ಹೊಸರೀತಿಯ ಕಟ್ಟಡಗಳೂ ಒಂದು ರೀತಿಯಲ್ಲಿ ಪಕ್ಷಿಗಳ ಅಳಿವಿಗೆ ಕಾರಣವಾಗುತ್ತದೆ. ಈಗ ಎಲ್ಲೆಡೆ ನಗರ ಪ್ರದೇಶಗಳಲ್ಲಿ ಅಲಂಕಾರಕ್ಕಾಗಿ ಮನೆ, ಬಿಲ್ಡಿಂಗ್‌ಗಳಿಗೆ ಗ್ಲಾಸ್ ಅಳವಡಿಸುತ್ತಿದ್ದಾರೆ. 

ಪಕ್ಷಿಗಳು ಬಂದು ಕಿಟಿಕಿ ಪಕ್ಕ ಕುಳಿತಾಗ ಗಾಜಿನ ಕಿಟಕಿಗಳ ಶಾಖ ತಗಲಿ ಅವುಗಳಿಗೆ ಹಾನಿ ಸಂಭವಿಸುವ ಘಟನೆಗಳೂ ಇರುತ್ತವೆ ಎಂದು ಪಕ್ಷಿ ತಜ್ಞರು ಹೇಳುತ್ತಾರೆ.

ಬಳ್ಳಾರಿಯಂತಹ ನಗರದಲ್ಲಿ ಬಿಸಿಲಿನ ತಾಪಮಾನ 35ರಿಂದ 37 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗುತ್ತಿದೆ. ಮಧ್ಯಾಹ್ನ 12 ಗಂಟೆಯಿಂದ 3 ಗಂಟೆ ಸಮಯದಲ್ಲಿ ಬಿಸಿಲಿನ ಝಳ ಹೆಚ್ಚಾಗಿರುತ್ತದೆ. ಈ ಬಿಸಿಲಿನ ತಾಪದಿಂದ ನಿತ್ರಾಣಗೊಂಡು ಬೀಳುವ ಪಕ್ಷಿಗಳಿಗೆ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. 10ರಿಂದ 15 ದಿನಗಳ ಕಾಲ ಚಿಕಿತ್ಸೆ, ಆಹಾರ ಹಾಗೂ ವಿಶ್ರಾಂತಿ ಅಗತ್ಯವಿರುತ್ತದೆ. ಬಳಿಕ ಅದು ತನ್ನ ಹಿಂದಿನ ಸ್ಥಿತಿಗೆ ಮರಳುತ್ತದೆ. ನಂತರ ಹಾರಾಟ ನಡೆಸಲು ಅದರ ದೇಹ ಸ್ಪಂದಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರು ಸಹಕಾರ ನೀಡಿದರೆ ವನ್ಯಜೀವಿ ಸಂಕುಲಗಳು ಉಳಿಯುತ್ತವೆ. ಪ್ರಾಣಿ-ಪಕ್ಷಿಗಳನ್ನು ಉಳಿಸಲು ಪ್ರತಿಯೊಬ್ಬರೂ ಕೈ ಜೋಡಿಸುವುದು ತುಂಬಾ ಅಗತ್ಯವಿದೆ.

Similar News