ಆಸ್ಟ್ರೇಲಿಯದ ಮಾಜಿ ಟೆಸ್ಟ್ ನಾಯಕ ಟಿಮ್ ಪೈನ್ ಎಲ್ಲಾ ರೀತಿಯ ದೇಶೀಯ ಕ್ರಿಕೆಟ್‌ ಗೆ ವಿದಾಯ

Update: 2023-03-17 07:22 GMT

ಹೊಸದಿಲ್ಲಿ: ಹೋಬರ್ಟ್‌ನಲ್ಲಿ ನಡೆದ ಟ್ಯಾಸ್ಮೆನಿಯಾ ಹಾಗೂ  ಕ್ವೀನ್ಸ್‌ಲ್ಯಾಂಡ್ ನಡುವಿನ ಶೆಫೀಲ್ಡ್ ಶೀಲ್ಡ್ ಪಂದ್ಯದ ನಂತರ ಆಸ್ಟ್ರೇಲಿಯದ ಮಾಜಿ ನಾಯಕ ಟಿಮ್ ಪೈನ್ ಎಲ್ಲಾ ರೀತಿಯ ದೇಶೀಯ ಕ್ರಿಕೆಟ್‌ನಿಂದ ಶುಕ್ರವಾರ ನಿವೃತ್ತರಾದರು.

4 ದಿನದ ಪಂದ್ಯವು ಡ್ರಾನಲ್ಲಿ ಕೊನೆಗೊಂಡ ನಂತರ ಪೈನ್  ಅವರಿಗೆ ತಂಡದ ಸಹ ಆಟಗಾರರು ಗೌರವ ವಂದನೆ ನೀಡಿದಾಗ ಪೈನ್ ಭಾವುಕರಾದರು.

ಶೆಫೀಲ್ಡ್ ಶೀಲ್ಡ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಟ್ಯಾಸ್ಮೆನಿಯಾ ಪರ ಟಿಮ್ ಪೈನ್ 42 (62 ಎಸೆತ) ರನ್ ಗಳಿಸಿದರು, ಆದರೆ ಅವರು ಎರಡನೇ ಇನಿಂಗ್ಸ್‌ನಲ್ಲಿ 3 ರನ್‌ಗಳಿಗೆ ಅಜೇಯರಾಗಿದ್ದರು.

ಶೆಫೀಲ್ಡ್ ಶೀಲ್ಡ್‌ನಲ್ಲಿ 95 ಪಂದ್ಯಗಳ ನಂತರ ಟಿಮ್ ಪೈನ್ ಅವರ ಪ್ರಥಮ ದರ್ಜೆ ವೃತ್ತಿಜೀವನವು ಕೊನೆಗೊಳ್ಳುತ್ತದೆ. ಅವರು 2005 ರಲ್ಲಿ ದಕ್ಷಿಣ ಆಸ್ಟ್ರೇಲಿಯ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದರು.

ಆಸ್ಟ್ರೇಲಿಯದ ಅತ್ಯುತ್ತಮ ಟೆಸ್ಟ್ ವಿಕೆಟ್‌ಕೀಪರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಟಿಮ್ ಪೈನ್, 2021 ರಲ್ಲಿ ಆ್ಯಶಸ್ ಆರಂಭವಾಗುವ ಒಂದು ವಾರದ ಮೊದಲು ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು.

ಪೈನ್ 2018 ರಿಂದ 2021 ರವರೆಗೆ 23 ಟೆಸ್ಟ್‌ಗಳಲ್ಲಿ ಆಸ್ಟ್ರೇಲಿಯ ತಂಡವನ್ನು ಮುನ್ನಡೆಸಿದ್ದರು.  ಪೈನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 4,000 ರನ್ ಗಳಿಸಿದ್ದಾರೆ.

Similar News