ಮದ್ರಸಾಗಳು ಅಗತ್ಯವಿಲ್ಲ, ಅದಕ್ಕಾಗಿ 600 ಮದ್ರಸಾಗಳನ್ನು ಮುಚ್ಚಿಸಿದೆ: ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ

Update: 2023-03-17 09:40 GMT

ಬೆಳಗಾವಿ: ನಾನು ಅಸ್ಸಾಂ ರಾಜ್ಯದಲ್ಲಿ ಈವರೆಗೆ 600 ಮದ್ರಸಾಗಳನ್ನು ಮುಚ್ಚಿಸಿದ್ದು, ನನಗೆ ಶಾಲೆ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು ಬೇಕಿರುವುದರಿಂದ ಎಲ್ಲ ಮದ್ರಸಾಗಳನ್ನು ಮುಚ್ಚಿಸಲು ಬಯಸಿದ್ದೇನೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.

ಚುನಾವಣಾ ರಾಜ್ಯವಾದ ಕರ್ನಾಟಕದ ಬೆಳಗಾವಿಯ ಶಿವಾಜಿ ಮಹಾರಾಜ್ ಉದ್ಯಾನವನದಲ್ಲಿ 'ಶಿವ ಚರಿತೆ'ಯ ಅಂಗವಾಗಿ ಗುರುವಾರ ಆಯೋಜಿಸಲಾಗಿದ್ದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಹಿಮಂತ ಬಿಸ್ವ ಶರ್ಮ, ಬಾಂಗ್ಲಾ ದೇಶದಿಂದ ಈಶಾನ್ಯ ರಾಜ್ಯಗಳಿಗೆ ವಲಸೆ ಬಂದಿರುವವರು ಅಲ್ಲಿನ ನಾಗರಿಕತೆ ಹಾಗೂ ಸಂಸ್ಕೃತಿಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಹಿಮಂತ ಬಿಸ್ವ ಶರ್ಮ, ಕಾಂಗ್ರೆಸ್ ಪಕ್ಷವು ಭಾರತದ ಚರಿತ್ರೆಯೆಂದರೆ ಮೊಘಲ್ ಚಕ್ರವರ್ತಿಗಳದ್ದು ಎಂಬಂತೆ ಬಿಂಬಿಸಿತ್ತು. ಅವರು ಇದೀಗ ನವ ಮೊಘಲರನ್ನು ಪ್ರತಿನಿಧಿಸುತ್ತಾರೆ ಎಂದು ಕಿಡಿ ಕಾರಿದ್ದಾರೆ.

"ಒಂದಾನೊಂದು ಕಾಲದಲ್ಲಿ ದಿಲ್ಲಿಯ ಆಡಳಿತಗಾರನು ದೇವಾಲಯಗಳನ್ನು ಧ್ವಂಸಗೊಳಿಸುವ ಮಾತನಾಡುತ್ತಿದ್ದ. ಆದರೆ, ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ನಾನು ದೇವಾಲಯಗಳನ್ನು ನಿರ್ಮಿಸುವ ಕುರಿತು ಮಾತನಾಡುತ್ತಿದ್ದೇನೆ. ಇದು ನವ ಭಾರತ. ಕಾಂಗ್ರೆಸ್ ಪಕ್ಷವು ಈ ನವ ಭಾರತವನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷವು ಇದೀಗ ನವ ಮೊಘಲರನ್ನು ಪ್ರತಿನಿಧಿಸುತ್ತಿದೆ" ಎಂದು ಶರ್ಮ ಟೀಕಿಸಿದ್ದಾರೆ.

ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟ್ ಪಕ್ಷಗಳು ಭಾರತದ ಚರಿತ್ರೆಯಲ್ಲಿ ಮೊಘಲರನ್ನು ವಿಜೃಂಭಿಸುತ್ತಿವೆ. ಆದರೆ, ಭಾರತದ ಚರಿತ್ರೆಯೆಂದರೆ, ಛತ್ರಪತಿ ಶಿವಾಜಿ ಮಹಾರಾಜ್ ಚರಿತ್ರೆ ಕೂಡಾ ಎಂದು ಅವರು ಪ್ರತಿಪಾದಿಸಿದ್ದಾರೆ. "ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟ್ ಪಕ್ಷಗಳು ಭಾರತದ ಚರಿತ್ರೆ ಬಾಬರ್, ಔರಂಗಜೇಬ್ ಮತ್ತು ಶಹಜಹಾನ್ ಅವರದ್ದು ಮಾತ್ರ ಎಂಬಂತೆ ಬಿಂಬಿಸಿವೆ. ಆದರದು, ಛತ್ರಪತಿ ಶಿವಾಜಿ ಮಹಾರಾಜ್ ಹಾಗೂ ಗುರು ಗೋಬಿಂದ್ ಸಿಂಗ್ ಚರಿತ್ರೆ ಕೂಡಾ" ಎಂದು ಅವರು ಹೇಳಿದ್ದಾರೆ.

ಔರಂಗಜೇಬನ ಕಾಲದಲ್ಲಿ ಹಲವಾರು ಮಂದಿಯನ್ನು ಬಲವಂತದ ಮತಾಂತರ ಮಾಡುವ ಮೂಲಕ ಸನಾತನ ಸಂಸ್ಕೃತಿಯನ್ನು ಅಳಿಸಿ ಹಾಕುವ ಪ್ರಯತ್ನ ಮಾಡಲಾಗಿತ್ತು ಎಂದೂ ಅವರು ಆರೋಪಿಸಿದ್ದಾರೆ.

Similar News