ತರಬೇತಿ ವಿಮಾನ ಪತನ: ಪೈಲಟ್‌ಗಳಿಬ್ಬರು ಮೃತ್ಯು

Update: 2023-03-19 02:32 GMT

ಭೋಪಾಲ್/ ಜಬಲ್ಪುರ: ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯಲ್ಲಿ ತರಬೇತಿ ವಿಮಾನವೊಂದು ಶನಿವಾರ ಸಂಜೆ ಅಪಘಾತಕ್ಕೀಡಾಗಿ ಹಿಮಾಚಲ ಪ್ರದೇಶದ ಕ್ಯಾಪ್ಟನ್ ಮೋಹಿತ್ ಠಾಕೂರ್ ಮತ್ತು ತರಬೇತಿ ಪಡೆಯುತ್ತಿದ್ದ ಪೈಲಟ್ ಗುಜರಾಥ್‌ನ ವಿ.ಮಹೇಶ್ವರಿ ಎಂಬುವವರು ಮೃತಪಟ್ಟಿದ್ದಾರೆ,

ನ್ಯಾಷನಲ್ ಫ್ಲೈಯಿಂಗ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ (ಎನ್‌ಎಫ್‌ಟಿಐ) ಗೆ ಸೇರಿದ ಡೈಮಂಡ್ ಡಿಎ-40 ತರಬೇತಿ ವಿಮಾನ ಮಹಾರಷ್ಟ್ರದ ಗೋಂದಿಯಾ ಜಿಲ್ಲೆಯ ಬಿರ್ಸಿ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿತ್ತು. ಸುಮಾರು 40 ಕಿಲೋಮೀಟರ್ ದೂರದ ಬಾಲಾಘಾಟ್‌ನ ದಟ್ಟ ಅರಣ್ಯ ಪ್ರದೇಶದಲ್ಲಿ ಅಪಘಾತಕ್ಕೀಡಾಯಿತು.

ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ. ಕಿರ್ಣಾಪುರ ಪ್ರದೇಶದ ಭಕ್ಕುತೋಲಾ ಗ್ರಾಮದ ಬಳಿಯ ವಿಡಿಯೊ ದೃಶ್ಯಾವಳಿಯಲ್ಲಿ ಸುಟ್ಟುಕರಕಲಾದ ದೇಹಗಳು ಮತ್ತು ವಿಮಾನದ ಅವಶೇಷಗಳ ನಡುವೆ ಗ್ರಾಮಸ್ಥರು ಇರುವ ದೃಶ್ಯ ಕಾಣಿಸುತ್ತಿದೆ.

ನಾಲ್ಕು ಆಸನಗಳ ವಿಮಾನ ಟೇಕಾಫ್ ಆದ 15 ನಿಮಿಷಗಳ ಬಳಿಕ ಸಂಜೆ 3.20ಕ್ಕೆ ಅಪಘಾತಕ್ಕೀಡಾಗಿದೆ. ಇದರ ಅವಶೇಷಗಳು 100 ಅಡಿ ಆಳದ ಕಂದಕದಲ್ಲಿ ಪತ್ತೆಯಾಗಿದೆ. ಪೊಲೀಸರು ಹಾಗೂ ರಕ್ಷಣಾ ಪಡೆಯ ಸಿಬ್ಬಂದಿ ಅಪಘಾತಕ್ಕೀಡಾದ ಸ್ಥಳವನ್ನು ತಲುಪಲು ಹರಸಾಹಸ ಮಾಡಬೇಕಾಯಿತು. ದಟ್ಟವಾದ ಕಾಡು ಮತ್ತು ಬೆಟ್ಟ ಪ್ರದೇಶದಲ್ಲಿ ಸುಮಾರು ಏಳು ಕಿಲೋಮೀಟರ್ ದೂರಕ್ಕೆ ನಡೆದುಕೊಂಡೇ ಹೋಗಿ ಅಪಘಾತ ಸ್ಥಳ ತಲುಪಿದರು.

Similar News