ಉತ್ತರಾಖಂಡ ಬಿಜೆಪಿ ಮಾಜಿ ಸಚಿವನ ಪುತ್ರನ ವಿರುದ್ಧ ಕೊಲೆ ಆರೋಪ ಅಂತಿಮಪಡಿಸಿದ ನ್ಯಾಯಾಲಯ

Update: 2023-03-19 04:12 GMT

ಡೆಹ್ರಾಡೂನ್: ಇಡೀ ದೇಶದಲ್ಲಿ ಸುದ್ದಿ ಮಾಡಿದ್ದ 2022ರ ಹೃಷಿಕೇಶ ರೆಸಾರ್ಟ್ ರಿಸೆಪ್ಷನಿಸ್ಟ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮಾಜಿ ಸಚಿವನ ಪುತ್ರ ಪುಳಕಿತ್ ಆರ್ಯ, ಆತನ ಸಹಚರರಾದ ಸೌರಭ್ ಭಾಸ್ಕರ್ ಮತ್ತು ಅಂಕಿತ್ ಗುಪ್ತಾ ಎಂಬುವವರ ವಿರುದ್ಧ ಪೌರಿ ಗರ್ವಾಲ್ ಜಿಲ್ಲೆಯ ಕೊತ್‌ದ್ವಾರ್ ಸೆಷನ್ಸ್ ನ್ಯಾಯಾಲಯ ಶನಿವಾರ ಆರೋಪ ಹೊರಿಸಿದೆ.

ರೆಸಾರ್ಟ್‌ನ ವಿಐಪಿ ಅತಿಥಿಗಳಿಗೆ ವಿಶೇಷ ಸೇವೆಗಳನ್ನು ನೀಡಲು ನಿರಾಕರಿಸಿದ 19 ವರ್ಷದ ಯುವತಿ ರಿಸೆಪ್ಷನಿಸ್ಟ್ ಅನ್ನು ಅಪಹರಿಸಿ ಕೊಲೆ ಮಾಡಲಾಗಿದೆ ಎಂದು ಆಪಾದಿಸಲಾಗಿತ್ತು. ನ್ಯಾಯಾಲಯ ಆವರಣದಲ್ಲಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯ ನಡುವೆ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆ ತರಲಾಗಿತ್ತು.

ರೆಸಾರ್ಟ್ ಮಾಲೀಕ ಹಾಗೂ ಮುಖ್ಯ ಆರೋಪಿ ಪುಳಕಿತ್‌ನ ಜಾಮೀನು ಅರ್ಜಿಯನ್ನು ತಳ್ಳಿಹಾಕಿದ ನ್ಯಾಯಾಲಯ, ಆತನ ವಿರುದ್ಧ ಹತ್ಯೆ, ಲೈಂಗಿಕ ಕಿರುಕುಳ, ಸಾಕ್ಷ್ಯ ನಾಶದ ಆರೋಪದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302, 354-ಎ ಮತ್ತು 201ರ ಅನ್ವಯ ಆರೋಪ ಅಂತಿಮಪಡಿಸಿತು. ಜತೆಗೆ ಅನೈತಿಕ ಕಳ್ಳಸಾಗಾಣಿಕೆ (ತಡ) ಕಾಯ್ದೆಯ ಸೆಕ್ಷನ್ 5(1)ರ ಅನ್ವಯ ವ್ಯಕ್ತಿಯನ್ನು ವೇಶ್ಯಾವಾಟಿಕೆಗೆ ಬಲವಂತಪಡಿಸಿದ ಆರೋಪವನ್ನೂ ಹೊರಿಸಲಾಗಿದೆ. ಪುಳಕಿತ್, ಉತ್ತರಾಖಂಡದ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ವಿನೋದ್ ಆರ್ಯ ಅವರ ಪುತ್ರ. ತ್ರಿವೇಂದ್ರ ಸಿಂಗ್ ರಾವತ್ ಸರ್ಕಾರದಲ್ಲಿ2021ರವರೆಗೂ ಸಚಿವರಾಗಿದ್ದ ಇವರನ್ನು ಬಿಜೆಪಿ, ಈ ಪ್ರಕರಣದ ಬಳಿಕ ಉಚ್ಚಾಟಿಸಿದೆ.

"ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆರೋಪವನ್ನು ಅಂತಿಮಪಡಿಸಿದೆ. ಮೂವರು ಆರೋಪಿಗಳು ತಾವು ತಪ್ಪಿತಸ್ಥರಲ್ಲ ಎಂದು ವಾದಿಸಿದ್ದರು ಹಾಗೂ ಆರೋಪಗಳ ಬಗ್ಗೆ ನ್ಯಾಯಾಲಯ ವಿಚಾರಣೆಗೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಮಾರ್ಚ್ 28ಕ್ಕೆ ನಿಗದಿಪಡಿಸಲಾಗಿದೆ. ಇದಕ್ಕೂ ಮುನ್ನ ಪುಳಕಿತ್ ಹಾಗೂ ಗುಪ್ತಾ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಭಾಸ್ಕರ್ ಜಾಮೀನು ಅರ್ಜಿಯನ್ನು ಮಾರ್ಚ್ 15ರಂದೇ ತಿರಸ್ಕರಿಸಲಾಗಿತ್ತು" ಎಂದು ಆರೋಪಿಗಳ ಪರ ವಕೀಲ ಅಮಿತ್ ಸಜ್ವಾನ್ ಹೇಳಿದ್ದಾರೆ.

2022ರ ಸೆಪ್ಟೆಂಬರ್ 18ರಂದು 19 ವರ್ಷದ ಯುವತಿಯ ಹತ್ಯೆ ನಡೆದ ಬಗ್ಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

Similar News