ರಾಷ್ಟ್ರೀಯ ಅಭಿಯಾನಗಳು ಜಾಗತಿಕ ಸಾಧನೆ ಗುರಿಗೆ ಪೂರಕ: ಸಚಿವ ಜೈಶಂಕರ್

Update: 2023-03-19 15:09 GMT

ಉಡುಪಿ, ಮಾ.19: ಬಡತನದ ಪ್ರಮಾಣ ಕುಸಿತ, ಮಾನವ ಅಭಿವೃದ್ಧಿ ಸೂಚ್ಯಂಕ, ಸ್ವಚ್ಛ ಭಾರತ ಸೇರಿದಂತೆ ರಾಷ್ಟ್ರೀಯ ಅಭಿಯಾನಗಳು ಜಾಗತಿಕ ಸಾಧನೆಯ ಗುರಿಗೆ ಪೂರಕವಾಗಿದೆ. 2047ರಲ್ಲಿ ಭಾರತ ಅಭಿವೃದ್ಧಿಯಲ್ಲಿ ಜಗತ್ತಿನ ಮುಂಚೂಣಿಯ ರಾಷ್ಟ್ರವಾಗಲು ಸ್ವಾತಂತ್ರ್ಯ ಅಮೃತ ಮಹೋತ್ಸವದ ಗಟ್ಟಿ ಹೆಜ್ಜೆಯ ಹಾದಿಯಲ್ಲಿ ದಶಕದ ಸಾಧನೆ ತಳಪಾಯವಾಗಲಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಡಾ.ಸುಬ್ರಹ್ಮಣ್ಯಂ ಜೈ ಶಂಕರ್ ಹೇಳಿದ್ದಾರೆ.

ಮಾಹೆ ಅಧೀನದ ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ ವತಿ ಯಿಂದ ಅಂಬಾಗಿಲಿನ ಅಮೃತ್ ಗಾರ್ಡನ್‌ ನಲ್ಲಿ ರವಿವಾರ ನಡೆದ ಕಾರ್ಯ ಕ್ರಮದಲ್ಲಿ 29ನೇ ನಾಯಕತ್ವ ಸರಣಿ ‘ಅಮೃತ ಕಾಲದಲ್ಲಿ ಭಾರತ’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಭಾರತ ಸಮಗ್ರ ಶಕ್ತಿಯಾದರೆ ಜಾಗತಿಕವಾಗಿ ಅನ್ಯ ರಾಷ್ಟ್ರಗಳ ಮಾನ್ಯತೆ ಸಿಗಲು ಸಾಧ್ಯವಾಗುತ್ತದೆ ಭಾರತವನ್ನು ಯುವಜನತೆ ಕೌಶಲ್ಯ, ಪ್ರತಿಭೆಯ ನೆಲೆಯಲ್ಲಿ ಜಾಗತಿಕ ಕಾರ್ಯ ತತ್ಪರತೆಯ ಕ್ಷೇತ್ರವಾಗಿ ಪರಿಗಣಿಸಿ ದುಡಿಯಬೇಕು. ಆಗ ಮಾತ್ರ ಭಾರತಕ್ಕೆ ಅಮೃತ ಕಾಲದಲ್ಲಿ ಉಜ್ವಲ ಭವಿಷ್ಯ ದೊರೆಯಲು ಸಾಧ್ಯವಿದೆ. ಜಾಗತಿಕವಾಗಿ ಉತ್ಪಾದನೆಯ ತೀವ್ರ ಕೊರತೆಯಿದ್ದು 40,000 ಭಾರತೀಯರು ಚಿಪ್ ವಿನ್ಯಾಸ ಕ್ಷೇತ್ರದಲ್ಲಿದ್ದರೂ ಸಾಲುತ್ತಿಲ್ಲ. ದೇಶೀಯ ಮಾತ್ರವಲ್ಲ ಜಾಗತಿಕ ಸವಾಲುಗಳಿಗೆ ನಾವು ಪರಿಹಾರ ಕಾಣಬೇಕು ಎಂದರು.

ದೇಶೀಯ ಉತ್ಪಾದನೆ ನಿಟ್ಟಿನಲ್ಲಿ ಮೇಕ್ ಇನ್ ಇಂಡಿಯಾ ಸಮಸ್ಯೆಗಳಿಗೆ ಪರಿಹಾರದೊಂದಿಗೆ ಭಾರತೀಯರ ಮನೋಭಾವವನ್ನು ಕೂಡ ಬದಲಾಯಿಸಿದೆ. ದೇಶದಲ್ಲಿ ಪಾಸ್‌ಪೋರ್ಟ್ ಸೆಂಟರ್ ಇಂದು 100ರಿಂದ 500ಕ್ಕೆ ಏರಿಕೆ ಯಾಗಿದೆ ಎಂದ ಅವರು, ಮೂಲಭೂತ ಸೌಲಭ್ಯ ಅಭಿವೃದಿಯೊಂದಿಗೆ ಸೋರಿಕೆ ತಡೆದು, ಆಡಳಿತದಲ್ಲಿ ಸುಧಾರಣೆ, ಬದಲಾವಣೆಗೆ ಡಿಜಿಟಲ್ ಇಂಡಿಯಾ ವೇದಿಕೆಯಾಗಿದೆ. ಈ ಮೂಲಕ ಪ್ರಜಾಪ್ರಭುತ್ವದಲ್ಲಿ ಮೌನ ಕ್ರಾಂತಿಯಾಗಿದೆ ಎಂದು ತಿಳಿಸಿದರು.

ಭಾರತವು ಜಾಗತಿಕ ಭಾಗವಾಗಿ ಎಲ್ಲ ಸಮಸ್ಯೆಗಳಿಗೆ ಸಾಂಸ್ಕೃತಿಕವಾಗಿಯೂ ಸ್ಪಂದಿಸುವ ಜವಾಬ್ದಾರಿ ಹೊಂದಿದ್ದು, ನೆರೆರಾಷ್ಟ್ರಗಳ ಸ್ನೇಹ ಶೀಲ ವಾತಾವರಣ ದಲ್ಲಿ ಭಾರತ ಮುಂದಿನ 25ವರ್ಷಗಳಲ್ಲಿ ಜಾಗತಿಕ ಹೆಜ್ಜೆ ಗುರುತನ್ನು ಮೂಡಿಸುವ ಅವಕಾಶವನ್ನು ಯುವಜನತೆ ಬಳಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಮಾಹೆ ವಿವಿ ಕುಲಪತಿ ಲೆ.ಜ.(ಡಾ.) ಎಂ.ಡಿ.ವೆಂಕಟೇಶ್ ಸ್ವಾಗತಿಸಿದರು. ಡಾ.ಜೀವನ್ ಕಾರ್ಯಕ್ರಮ ನಿರೂಪಿಸಿದರು. ಮಾಹೆ ಸಹ ಕುಲಪತಿ ಡಾ. ಮಧು ವೀರ್ ರಾಘವನ್ ಸಚಿವರನ್ನು ಪರಿಚಯಿಸಿದರು. ಪ್ರೊ.ಪೂರ್ಣಿಮಾ ವೆಂಕಟೇಶ್ ವಂದಿಸಿದರು. 

Similar News