ಆತ್ಮನಿರ್ಭರ ಎಲ್ಲರ ಮಂತ್ರವಾಗಿರಲಿ: ಕೇಂದ್ರ ಸಚಿವ ಜೈಶಂಕರ್

Update: 2023-03-19 16:07 GMT

ಮಣಿಪಾಲ: ‘ಆತ್ಮನಿರ್ಭರ’ ಎಂಬುದು ಪ್ರತಿಯೊಬ್ಬನ ಮಂತ್ರವಾಗಿರಬೇಕು. ಇಂಡಿಯಾಕ್ಕಿಂತ ‘ಭಾರತ’ವನ್ನು ಹೆಚ್ಚೆಚ್ಚು ಪ್ರಸ್ತುತ ಪಡಿಸಬೇಕು ಎಂದು ಕೇಂದ್ರದ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಸುಬ್ರಹ್ಮಣ್ಯ ಜೈಶಂಕರ್ ಹೇಳಿದ್ದಾರೆ.

ಜಿಲ್ಲಾ ಬಿಜೆಪಿ ವತಿಯಿಂದ ಮಣಿಪಾಲದ ಕಂಟ್ರಿ ಇನ್ ಹೊಟೇಲ್ ಸಭಾಂಗಣದಲ್ಲಿ ಇಂದು ಸಂಜೆ ನಡೆದ ಅನಿವಾಸಿ ಭಾರತೀಯರು ಹಾಗೂ ಪ್ರಬುದ್ಧರ ಗೋಷ್ಠಿ ಮತ್ತು ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ವಿಶ್ವ ಇಂದು ಹೊಸ ‘ನಾಗರೀಕತೆ’ ಉದಯಿಸುತ್ತಿರುವುದನ್ನು ಕಾಣುತ್ತಿದೆ. ಜನರು ಹೊಸ ರೀತಿಯಲ್ಲಿ ಮಾತನಾಡುತ್ತಿರುವುದನ್ನು ಹಾಗೂ ಭಾವನೆಗಳನ್ನು ವ್ಯಕ್ತಪಡಿಸುತ್ತಿರುವುದನ್ನು ಕಾಣುತಿದ್ದೇವೆ. ಭಾರತ ತನ್ನ ಸ್ವಾತಂತ್ರ್ಯವನ್ನು ಪಡೆದಿದೆ. ಪ್ರತಿಯೊಬ್ಬರಿಗೂ ದೇಶದ ಇತಿಹಾಸದ ಅರಿವಿರಬೇಕು ಎಂದವರು ಹೇಳಿದರು.

ಭಾರತದಂಥ ಬಹುತ್ವ ಸಮಾಜವನ್ನು ಹೊಂದಿರುವ ದೇಶದಲ್ಲಿ ಒಳಗಿನ ಏಕತೆಯನ್ನು ಬಲಪಡಿಸಬೇಕಾಗಿದೆ. ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು, ವಿಶ್ವದೆದುರು ದೇಶದ ಏಕೀಕೃತ ವ್ಯಕ್ತಿತ್ವವನ್ನು ಪ್ರದರ್ಶಿಸಬೇಕಾಗುತ್ತೆ. ಅಭಿವೃದ್ಧಿ ಹೊಂದಿದ ದೇಶಗಳು ನೂರಾರು ವರ್ಷಗಳಿಂದ ಜಾಗತಿಕ ಆಖ್ಯಾನವನ್ನು ನಿರೂಪಿಸಿವೆ. ಹೀಗಾಗಿ ಭಾರತದಲ್ಲಿ ಹೆಚ್ಚೆಚ್ಚು ಸಾಂಸ್ಕೃತಿಕ ಹಾಗೂ ನಾಗರಿಕ ಆಖ್ಯಾನಗಳನ್ನು ನಾವು ಅಭಿವೃದ್ಧಿ ಪಡಿಸಬೇಕಾಗುತ್ತದೆ ಎಂದು ಜೈಶಂಕರ್ ನುಡಿದರು.

ಇಂದು ಭಾರತದ ಕುರಿತ ಗ್ರಹಿಕೆ ಬದಲಾಗಿದೆ. ಭಾರತ ಇಂದು ಜಿ-20ದೇಶಗಳ ಸಂಘಟನೆಯ ಅಧ್ಯಕ್ಷತೆ ವಹಿಸಿರುವುದರಿಂದ ಎಲ್ಲಾ ಅಭಿವೃದ್ಧಿಶೀಲ ದೇಶಗಳ ಪರವಾಗಿ ಮಾತನಾಡಲು ಸಾಧ್ಯವಿದೆ. ಬೇರೆ ದೇಶಗಳಲ್ಲಿ ಜಿ-20 ಕೆಲವೇ ನಗರಗಳಲ್ಲಿ ನಡೆದರೆ ಭಾರತದಲ್ಲಿ ಅದು ದೇಶದ ೫೯ ಪಟ್ಟಣಗಳಲ್ಲಿ ನಡೆಯಲಿದೆ. ಇದರಿಂದ ಜಿ-20 ದೇಶಗಳಿಗೆ ಭಾರತದ ಪ್ರಾದೇಶಿಕ ಸಂಸ್ಕೃತಿ, ಆತಿಥ್ಯ ಹಾಗೂ ಆತ್ಮೀಯತೆಯ ಪರಿಚಯವಾಗಲು ಸಾಧ್ಯವಿದೆ ಎಂದರು.

ವಿಶ್ವದಲ್ಲಿಂದು ಐದನೇ ಬಲಿಷ್ಠ ಆರ್ಥಿಕತೆಯನ್ನು ಹೊಂದಿರುವ ಭಾರತ, ಈ ದಶಕದ ಕೊನೆಗೆ ಮೂರನೇ ಸ್ಥಾನಕ್ಕೇರುವ ನಿರೀಕ್ಷೆ ಇದೆ. ನರೇಂದ್ರ ಮೋದಿ ನಾಯಕತ್ವದಡಿ ಭಾರತ, ಬಲಿಷ್ಠವಾಗಿ ರೂಪುಗೊಳ್ಳುತಿದ್ದು ಉನ್ನತ ಸ್ಥಾನ ಪಡೆಯುವ ವಿಶ್ವಾಸವಿದೆ ಎಂದರು.

ತಮ್ಮ ಉಪನ್ಯಾಸದ ಕೊನೆಗೆ ಸಚಿವ ಎಸ್.ಜೈಶಂಕರ್ ಸಭಿಕರೊಂದಿಗೆ ಸಂವಾದ ನಡೆಸಿ, ಅವರ ವೈವಿದ್ಯಮಯ ಪ್ರಶ್ನೆಗಳಿಗೆ ಉತ್ತರಿಸಿದರು.

ಉಡುಪಿ ಶಾಸಕ ಕೆ.ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಉದಯಕುಮಾರ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಸುಮಿತ್ರಾ ಆರ್. ನಾಯಕ್, ನಯನಾ ಗಣೇಶ್, ರವೀಂದ್ರ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಬಿಜೆಪಿ ವತಿಯಂದ ಸಚಿವ ಜೈಶಂಕರ್‌ರನ್ನು ಸನ್ಮಾನಿಸಲಾಯಿತು. ವಿನೋದ್ ನಾಯಕ್ ಅತಿಥಿಗಳನ್ನು ಸ್ವಾಗತಿಸಿದರೆ, ಶ್ರೀನಾಥ್ ರಾವ್ ಕಾರ್ಯಕ್ರಮ ನಿರೂಪಿಸಿದರು.

Similar News