ಕಾಂಗ್ರೆಸ್ ಇಲ್ಲದೆ ಪ್ರತಿಪಕ್ಷಗಳ ಮೈತ್ರಿಕೂಟ ಸಾಧ್ಯವಿಲ್ಲ: ಜೈರಾಮ್ ರಮೇಶ್

Update: 2023-03-19 17:36 GMT

ಹೊಸದಿಲ್ಲಿ, ಮಾ. 19: ಕಾಂಗ್ರೆಸ್ ಇಲ್ಲದೆ ಪ್ರತಿಪಕ್ಷಗಳ ಮೈತ್ರಿ ಕೂಟಕ್ಕೆ ಬಿಜೆಪಿಯನ್ನು ಎದುರಿಸಲು ಸಾಧ್ಯವಿಲ್ಲ. ಒಂದು ವೇಳೆ 2024 ಸಾರ್ವತ್ರಿಕ ಚುನಾವಣೆಗೆ ಪ್ರತಿಪಕ್ಷಗಳ ಮೈತ್ರಿಕೂಟ ರೂಪುಗೊಂಡರೆ, ಕಾಂಗ್ರೆಸ್ ಅದರಲ್ಲಿ ಪ್ರಧಾನ ಪಾತ್ರ ವಹಿಸಲಿದೆ  ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಜೈರಾಮ್ ರಮೇಶ್, ಕರ್ನಾಟಕದಲ್ಲಿ ನಡೆಯಲಿರುವ ಚುನಾವಣೆಗಳು ಹಾಗೂ ಈ ವರ್ಷದ ಹಲವು ರಾಜ್ಯಗಳಲ್ಲಿ ನಡೆಯುವ ಚುನಾವಣೆ ಬಗ್ಗೆ  ಪಕ್ಷ ಮೊದಲ ಆದ್ಯತೆ ನೀಡಲಿದೆ. ಈಗಲೇ  ಈ ಎಲ್ಲಾ ವಿಷಯಗಳ ಬಗ್ಗೆ ಮಾತನಾಡುವುದು ಸೂಕ್ತವಲ್ಲ ಎಂದರು.

2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ದೂರ ಇರುವುದಾಗಿ ಮಮತಾ ಬ್ಯಾನರ್ಜಿ ಅವರ  ಟಿಎಂಸಿ ಹಾಗೂ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಹೇಳಿಕೆ ನೀಡಿದ ಹಾಗೂ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಸಾಧ್ಯತೆಯ ಸೂಚನೆ ನೀಡಿದ ಬಳಿಕ ಜೈರಾಮ್ ರಮೇಶ್ ಅವರು ಈ ಹೇಳಿಕೆ ನೀಡಿದ್ದಾರೆ.

ಟಿಎಂಸಿ ಹಾಗೂ ಎಸ್‌ಪಿಯ ನಡೆ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಧಕ್ಕೆ ತರಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘‘ಟಿಎಂಸಿ ಹಾಗೂ ಎಸ್‌ಪಿ ನಾಯಕರು ಸಭೆಗಳನ್ನು ನಡೆಸುತ್ತಿದ್ದಾರೆ. ತೃತೀಯ ರಂಗ, ಚತುರ್ಥ ರಂಗ ರಚನೆಯಾಗುತ್ತಲೇ ಇರುತ್ತದೆ. ಆದರೆ ವಿರೋಧ ಪಕ್ಷದಲ್ಲಿ ಕಾಂಗ್ರೆಸ್ ಇರುವುದು ಅತ್ಯಗತ್ಯ’’ ಎಂದರು.

Similar News