ರಾಹುಲ್ ಗಾಂಧಿ ಮಾನಹಾನಿ ಮಾಡಲು ಪ್ರಧಾನಿ ಮೋದಿ, ಮಮತಾ ಬ್ಯಾನರ್ಜಿ ಒಪ್ಪಂದ ಮಾಡಿಕೊಂಡಿದ್ದಾರೆ: ಕಾಂಗ್ರೆಸ್

Update: 2023-03-20 06:35 GMT

ಹೊಸದಿಲ್ಲಿ:''ರಾಹುಲ್ ಗಾಂಧಿ ಹಾಗೂ  ಕಾಂಗ್ರೆಸ್‌ನ ಪ್ರತಿಷ್ಠೆಗೆ ಧಕ್ಕೆ ತರಲು’’ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ  ಪ್ರಧಾನಿ ನರೇಂದ್ರ ಮೋದಿ ಅವರು ಪರಸ್ಪರ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಸೋಮವಾರ ಆರೋಪಿಸಿದ್ದಾರೆ.

ಎಎನ್‌ಐ ಜೊತೆ ಮಾತನಾಡಿದ ಚೌಧರಿ, "ಮಮತಾ ಬ್ಯಾನರ್ಜಿ ಅವರು ಪ್ರಧಾನಿಯವರ ನಿರ್ದೇಶನದ ಮೇರೆಗೆ ಮಾತನಾಡುತ್ತಿದ್ದಾರೆ. ಪ್ರಧಾನಿ ಹಾಗೂ  'ದೀದಿ' ಅವರು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ನ ಪ್ರತಿಷ್ಠೆಗೆ ಧಕ್ಕೆ ತರುವ ವಿಚಾರದಲ್ಲಿ ಒಪ್ಪಂದ ಮಾಡಿಕೊಂಡಿದ್ದಾರೆ'' ಎಂದರು.

"ಮಮತಾ ಈಡಿ-ಸಿಬಿಐ ದಾಳಿಯಿಂದ ತನ್ನನ್ನು ತಾನು ಉಳಿಸಿಕೊಳ್ಳಲು ಬಯಸುತ್ತಿದ್ದಾರೆ, ಅದಕ್ಕಾಗಿಯೇ ಅವರು  ಕಾಂಗ್ರೆಸ್ ವಿರುದ್ಧ ವಾಗಿದ್ದು, ಈ ಮೂಲಕ  ಪ್ರಧಾನಿಯನ್ನು ಸಂತೋಷಪಡಿಸುತ್ತಿದ್ದಾರೆ" ಎಂದು ಅವರು ಹೇಳಿದರು.

ರವಿವಾರ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಪಕ್ಷದ ಆಂತರಿಕ ಸಭೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, "ಬಿಜೆಪಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು "ಹೀರೋ" ಎಂದು ಬಿಂಬಿಸಲು ಪ್ರಯತ್ನಿಸುವ ಮೂಲಕ ಪ್ರಸ್ತುತ ಸಮಸ್ಯೆಗಳಿಂದ ಗಮನವನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಲಂಡನ್ ನಲ್ಲಿ ರಾಹುಲ್ ನೀಡಿದ ಹೇಳಿಕೆಯ ಮೇಲೆ ಸಂಸತ್ತಿನ ಕಲಾಪಗಳನ್ನು ಸ್ಥಗಿತಗೊಳಿಸುತ್ತಿದೆ. ರಾಹುಲ್ ಬಿಜೆಪಿಯ ಟಿಆರ್ ಪಿ ಆಗಿದ್ದಾರೆ'' ಎಂದಿದ್ದರು.

Similar News