ಬಿಹಾರದಲ್ಲಿ ತೆಲಂಗಾಣ ಮುಖ್ಯಮಂತ್ರಿಯನ್ನು ಶ್ಲಾಘಿಸಿದ ಅಸದುದ್ದೀನ್ ಉವೈಸಿ

Update: 2023-03-20 07:41 GMT

ಪಾಟ್ನಾ: ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿರುವ ತನ್ನ ತವರು ರಾಜ್ಯವಾದ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಮೇಲೆ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ (Asaduddin Owaisi) ಬಿಹಾರದಲ್ಲಿ ಹಾಡಿ ಹೊಗಳಿದ್ದಾರೆ.

ಬಿಹಾರದ ಮುಸ್ಲಿಂ ಬಾಹುಳ್ಯವಿರುವ, ಬಡತನ ಹಾಗೂ ನೆರೆಪೀಡಿತ ಜಿಲ್ಲೆಯಾದ ಸೀಮಾಂಚಲಕ್ಕೆ  ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.

"ಕೆಸಿಆರ್ ಅವರಿಗೆ ಒಂದು ದೂರದೃಷ್ಟಿ ಇದ್ದು, ಅವರು ತಮ್ಮ ಇಲ್ಲಿಯವರೆಗಿನ ಅವಧಿಯಲ್ಲಿ ಒಂದಿಷ್ಟು ಮೌಲ್ಯಯುತ ಕೆಲಸ ಮಾಡಿದ್ದಾರೆ" ಎಂದು ಪ್ರಾದೇಶಿಕ ನಾಯಕರಾದ ರಾವ್ ಥರದವರ ಪ್ರಧಾನಿ ಹುದ್ದೆ ಆಕಾಕ್ಷೆಯ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉವೈಸಿ ಉತ್ತರಿಸಿದ್ದಾರೆ. ಇದಲ್ಲದೆ ರಾವ್ ಅವರ ಸಹವರ್ತಿಗಳಾದ, ಕ್ರಮವಾಗಿ ಬಿಹಾರ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾದ ನಿತೀಶ್ ಕುಮಾರ್ ಹಾಗೂ ಮಮತಾ ಬ್ಯಾನರ್ಜಿಯವರನ್ನೂ ಉವೈಸಿ ಶ್ಲಾಘಿಸಿದ್ದಾರೆ.

119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಯಲ್ಲಿ 7 ಶಾಸಕರನ್ನು ಹೊಂದಿರುವ ಎಐಎಂಐಎಂನ ಮುಖ್ಯಸ್ಥರಾದ ಉವೈಸಿ, "ತೆಲಂಗಾಣ ಅಪಾರ ಪ್ರಮಾಣದ ಭೂಮಿ ಹೊಂದಿರುವ ರಾಜ್ಯವಾಗಿದ್ದು, ಹೀಗಾಗಿಯೇ ಅಲ್ಲಿನ ಜಿಡಿಪಿ ತುಂಬಾ ಉತ್ತೇಜನಕಾರಿಯಾಗಿದೆ. ಪಂಪ್ ಸೆಟ್ ಬಳಕೆಯಲ್ಲಿ ತೆಲಂಗಾಣವು ಗರಿಷ್ಠ ಮಟ್ಟದಲ್ಲಿದೆ. ಮೀನು ಉತ್ಪನ್ನಗಳ ಉತ್ಪಾದನೆಯಲ್ಲಿ ಎರಡನೆಯ ಸ್ಥಾನದಲ್ಲಿದೆ" ಎಂದು ಹೇಳಿದ್ದಾರೆ.

ತೆಲಂಗಾಣ ವಿಧಾನಸಭೆಯಲ್ಲಿ ಕೆಸಿಆರ್ ನೇತೃತ್ವದ ಬಿಆರ್‌ಎಸ್ ಭಾರಿ ಬಹುಮತ ಹೊಂದಿದ್ದರೂ, ಮುಂಬರುವ ವಿಧಾನಸಭಾ ಚುನಾವಣೆ ಹೊತ್ತಿಗೆ ಸಾಕಷ್ಟು ಒಳದಾರಿ ಮಾಡಿಕೊಂಡಿರುವ ಬಿಜೆಪಿ, ಕಾಂಗ್ರೆಸ್ ಪಕ್ಷವನ್ನೂ ಹಿಂದಿಕ್ಕಿ ಪ್ರಮುಖ ವಿರೋಧ ಪಕ್ಷವಾಗುವ ಸಾಧ್ಯತೆ ಇದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.

ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳ ವಿರುದ್ಧದ ವಾಗ್ದಾಳಿಯನ್ನು ಮುಂದುವರಿಸಿದ ಉವೈಸಿ, " ಅವರು ಮಹಾರಾಷ್ಟ್ರದಲ್ಲಿ ಆದ ರಾಜಕೀಯ ಬೆಳವಣಿಗೆಯನ್ನು ಬೊಟ್ಟು ಮಾಡಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಅಳುತ್ತಿದ್ದಾರೆ. ಆದರೆ, ಬಿಹಾರದಲ್ಲಿ ಮಾತ್ರ ಅಡ್ಡ ದಾರಿ ಹಿಡಿದು ನಮ್ಮ ಪಕ್ಷದ ಶಾಸಕರಿಗೆ ಆಮಿಷವೊಡ್ಡಿ ಸೆಳೆಯುತ್ತಿದ್ದಾರೆ" ಎಂದು ಟೀಕಿಸಿದ್ದಾರೆ.

2020ರಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ ಪಕ್ಷದ ಐವರು ಶಾಸಕರು ಆಯ್ಕೆಯಾಗಿದ್ದರು. ಈ ಪೈಕಿ ನಾಲ್ಕು ಶಾಸಕರು ಕಳೆದ ವರ್ಷ ಆರ್‌ಜೆಡಿ ಪಕ್ಷ ಸೇರ್ಪಡೆಯಾಗಿದ್ದರು. ಅಲ್ಲದೆ ಅವರ ಪೈಕಿ ಓರ್ವ ಶಾಸಕ ಸಂಪುಟ ಸಚಿವ ಸ್ಥಾನವನ್ನೂ ಗಿಟ್ಟಿಸಿದ್ದರು.

ಇದನ್ನೂ ಓದಿ: ಉರಿಗೌಡ-ನಂಜೇಗೌಡ ಸಿನೆಮಾ ಮಾಡೋದಿರಲಿ, ಆ ಬಗ್ಗೆ ಇನ್ಮುಂದೆ ಮಾತಾಡಲ್ಲ: ಸಚಿವ ಮುನಿರತ್ನ

Similar News