ಖಾಲಿಸ್ತಾನ್ ನಾಯಕ ಪರಾರಿಯಾದ ಕಾರು ಮಾದಕ ದ್ರವ್ಯ ದಂಧೆಕೋರನಿಗೆ ಸೇರಿದ್ದು: ಮೂಲಗಳು

Update: 2023-03-20 10:54 GMT

ಹೊಸ ದಿಲ್ಲಿ: ಖಾಲಿಸ್ತಾನ್ ಪರವಿರುವ ಅಮೃತ್ ಪಾಲ್ ಸಿಂಗ್ ಪರಾರಿಯಾಗಿರುವ ಮರ್ಸಿಡಿಸ್ ಕಾರು ಮಾದಕ ದ್ರವ್ಯ ದಂಧೆಕೋರನೊಬ್ಬನಿಗೆ ಸೇರಿದ್ದು ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಅಮೃತ್ ಪಾಲ್ ಸಿಂಗ್ ಪತ್ತೆಗಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ndtv.com ವರದಿ ಮಾಡಿದೆ.

ಪೊಲೀಸರು ಅಮೃತ್ ಪಾಲ್ ಸಿಂಗ್ ಪತ್ತೆಗಾಗಿ ವ್ಯಾಪಕ ಶೋಧ ನಡೆಸುವಾಗ, ಆತ ಶನಿವಾರ ಕಾರೊಂದರಲ್ಲಿ ಪರಾರಿಯಾಗಿದ್ದಾನೆ. ನಂತರ ಆತ ಕಾರನ್ನು ಮಾರ್ಗಮಧ್ಯದಲ್ಲೇ ಬಿಟ್ಟು ಓಡಿ ಹೋಗುವ ಮೂಲಕ ಪೊಲೀಸರ ಹಾದಿ ತಪ್ಪಿಸಿದ್ದಾನೆ.

ಈ ಮರ್ಸಿಡಸ್ ಕಾರನ್ನು ಮಾದಕ ದ್ರವ್ಯ ದಂಧೆಕೋರ ರಾವೆಲ್ ಸಿಂಗ್ ಆತನಿಗೆ ಉಡುಗೊರೆ ನೀಡಿದ್ದ ಎಂದು ಹೇಳಲಾಗಿದೆ. ಈ ಮರ್ಸಿಡಸ್ ಕಾರಿನಲ್ಲೇ ಪದೇ ಪದೇ ನಗರದಾದ್ಯಂತ ಸುತ್ತುತ್ತಿದ್ದ ಅಮೃತ್ ಪಾಲ್, ಕಾರಿನ ಚಾವಣಿಯ ಮೂಲಕ ಜನರತ್ತ ಕೈಬೀಸುತ್ತಿದ್ದ ಎಂದು ಹೇಳಲಾಗಿದೆ.

ಕಳೆದ ಮೂರು ದಿನಗಳಿಂದ ಪೊಲೀಸರು ಅಮೃತ್ ಪಾಲ್‌ಗಾಗಿ ಶೋಧ ನಡೆಸುತ್ತಿದ್ದಾರೆ. ಮರ್ಸಿಡಸ್ ನಂತರ ಬೈಕ್‌ನಲ್ಲಿ ಆತ ಪರಾರಿಯಾಗುತ್ತಿರುವುದು ಕೊನೆಯ ಬಾರಿ ಕಂಡು ಬಂದಿತ್ತು.

ಅಮೃತ್ ಪಾಲ್ ಸಿಂಗ್‌ಗೆ ಗಡಿಗುಂಟ ಪಾಕಿಸ್ತಾನದಿಂದ ಕಾರ್ಯಾಚರಿಸುತ್ತಿರುವ ಪಾಕಿಸ್ತಾನ ಮೂಲದ ಮಾದಕ ದ್ರವ್ಯ ದಂಧೆಕೋರರೊಂದಿಗೆ ಇರುವ ಸಂಬಂಧದ ಕುರಿತೂ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತನ್ನ ಬೆಂಬಲಿಗನೊಬ್ಬನನ್ನು ಬಿಡುಗಡೆ ಮಾಡುವಂತೆ ಪೊಲೀಸ್ ಠಾಣೆಗೆ ಅಮೃತ್ ಪಾಲ್ ಸಿಂಗ್ ತನ್ನ ಇತರ ಬೆಂಬಲಿಗರೊಂದಿಗೆ ಖಡ್ಗ ಹಾಗೂ ಬಂದೂಕುಗಳೊಂದಿಗೆ ದಾಳಿ ನಡೆಸಿದ ಒಂದು ತಿಂಗಳ ನಂತರ ಆತನ ವಿರುದ್ಧ ಪೊಲೀಸ್ ಕಾರ್ಯಾಚರಣೆ ಶುರುವಾಗಿದೆ.

Similar News