ಮುಂದ್ರಾದಲ್ಲಿ ರೂ. 34,900 ಕೋಟಿ ಮೊತ್ತದ ಪೆಟ್ರೋಕೆಮಿಕಲ್‌ ಯೋಜನೆ ಕೆಲಸ ಸ್ಥಗಿತಗೊಳಿಸಿದ ಅದಾನಿ ಸಮೂಹ

Update: 2023-03-20 11:30 GMT

ಹೊಸದಿಲ್ಲಿ: ಹಿಂಡೆನ್‌ಬರ್ಗ್‌ ವರದಿ ಹೊರಬಿದ್ದ ನಂತರ ಅದಾನಿ ಸಮೂಹ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಗಳ ಕುರಿತು ಹಲವಾರು ಪ್ರಶ್ನೆಗಳು ಎದ್ದಿರುವ ನಡುವೆಯೇ ಕಂಪೆನಿ ಗುಜರಾತಿನ ಮುಂದ್ರಾದಲ್ಲಿ ತನ್ನ ರೂ 34,900 ಕೋಟಿ ವೆಚ್ಚದ ಪೆಟ್ರೋಕೆಮಿಕಲ್‌  ಯೋಜನೆಗೆ ಸಂಬಂಧಿಸಿದ ಕಾಮಗಾರಿಯನ್ನು ಸ್ಥಗಿತಗೊಳಿಸಿದೆ.

ಕಚ್ಛ್‌ ಜಿಲ್ಲೆಯಲ್ಲಿ ಅದಾನಿ ಪೋರ್ಟ್ಸ್‌ ಎಂಡ್‌ ಸ್ಪೆಷಲ್‌ ಇಕನಾಮಿಕ್‌ ಝೋನ್‌ ಜಮೀನಿನಲ್ಲಿ ಗ್ರೀನ್‌ಫೀಲ್ಡ್‌ ಕೋಲ್-ಟು-ಪಿವಿಸಿ ಘಟಕ ಸ್ಥಾಪನೆಗಾಗಿ ಮುಂದ್ರಾ ಪೆಟ್ರೋಕೆಮ್‌ ಲಿಮಿಟೆಡ್‌ ಎಂಬ ಸಂಸ್ಥೆಯನ್ನು 2021 ರಲ್ಲಿ ಅದಾನಿ ಎಂಟರ್‌ಪ್ರೈಸಸ್‌ ಲಿ. ಸ್ಥಾಪಿಸಿತ್ತು.

ಆದರೆ ಇದೀಗ ಅದಾನಿ ಸಮೂಹವು ಮೇಲಿನ ಯೋಜನೆಗೆ ಸಂಬಂಧಿಸಿದಂತೆ ಎಲ್ಲಾ ಮಾರಾಟಗಾರರು  ಮತ್ತು ಪೂರೈಕೆದಾರರಿಗೆ ಮುಂದಿನ ಆದೇಶದವರೆಗೆ ಎಲ್ಲಾ ಚಟುವಟಿಕೆಗಳನ್ನು ತಕ್ಷಣ ಸ್ಥಗಿತಗೊಳಿಸುವಂತೆ ಇಮೇಲ್‌ಗಳನ್ನು ಕಳುಹಿಸಿದೆ ಎಂದು ವರದಿಯಾಗಿದೆ.

ಈ ಘಟಕವು ವಾರ್ಷಿಕ 2000 ಕಿಲೋ ಟನ್‌ ಪಿವಿಸಿ ಉತ್ಪಾದಿಸುವ ಸಾಮರ್ಥ್ಯ ಹೊಂದಲಿತ್ತು. ಈ ಘಟಕಕ್ಕೆ ಬೇಕಾಗಿದ್ದ ವಾರ್ಷಿಕ 3.1 ಮಿಲಿಯನ್‌ ಟನ್‌ ಕಲ್ಲಿದ್ದಲನ್ನು ಆಸ್ಟ್ರೇಲಿಯಾ, ರಷ್ಯಾ ಮತ್ತಿತರ ದೇಶಗಳಿಂದ ಆಮದುಗೊಳಿಸುವ ಉದ್ದೇಶವಿತ್ತು.

ಅದಾನಿ ಸಮೂಹವು ಈ ಹಿಂದೆ ತನ್ನ ರೂ 7000 ಕೋಟಿ ಮೊತ್ತದ ಕಲ್ಲಿದ್ದಲು ಸ್ಥಾವರ ಖರೀದಿ ಯೋಜನೆಯನ್ನು ಕೈಬಿಟ್ಟಿತ್ತಲ್ಲದೆ ಪಿಟಿಸಿಯಲ್ಲಿ ಪಾಲುಬಂಡವಾಳ ಹೊಂದುವ ಯತ್ನದಿಂದಲೂ ಹಿಂದೆ ಸರಿದಿತ್ತು. ಅದಾನಿ ಸಮೂಹವು ಅಂಬುಜಾ ಸಿಮೆಂಟ್‌ನಲ್ಲಿನ ತನ್ನ ಪಾಲು ಬಂಡವಾಳವನ್ನೂ ಮಾರಾಟ ಮಾಡಲು ಮುಂದಾಗಿದೆ ಎನ್ನಲಾಗಿದೆ. ಅಂಬುಜಾ ಸಿಮೆಂಟ್‌ ವಾಸ್ತವವಾಗಿ ಗೌತಮ್‌ ಅದಾನಿ ಅವರ ಸಹೋದರ ವಿನೋದ್‌ ಅದಾನಿಗೆ ಸೇರಿದ್ದು ಎಂದು ಇತ್ತೀಚೆಗೆ ಬಹಿರಂಗಗೊಂಡಿತ್ತು.

Similar News