×
Ad

ಇನ್ನೂ ತಲೆಮರೆಸಿಕೊಂಡಿರುವ ಅಮೃತ್‌ಪಾಲ್‌ ಸಿಂಗ್‌: ಗಡಿ ಭಾಗಗಳಲ್ಲಿ ಎಚ್ಚರಿಕೆಯಿಂದಿರುವಂತೆ ಕೇಂದ್ರ ಸೂಚನೆ

Update: 2023-03-20 14:58 IST

 ಹೊಸದಿಲ್ಲಿ: ಖಲಿಸ್ತಾನ ಬೆಂಬಲಿಗ, ಪ್ರತ್ಯೇಕತಾವಾದಿ ನಾಯಕ ಹಾಗೂ ವಾರಿಸ್‌ ಪಂಜಾಬ್‌ ದೇ ಮುಖ್ಯಸ್ಥ ಅಮೃತ್‌ಪಾಲ್‌ ಸಿಂಗ್‌ ಸಂಧುನನ್ನು ಬಂಧಿಸಲು ಕಾರ್ಯಾಚರಣೆ ಮುಂದುವರಿದಿದೆ.  ಆತ ಪಂಜಾಬ್‌ ಅಥವಾ ಭಾರತ-ನೇಪಾಳ ಗಡಿ ಮೂಲಕ ತಪ್ಪಿಸಿಕೊಳ್ಳುವ ಸಾಧ್ಯತೆಯಿರುವುದರಿಂದ ಗಡಿ ಭಾಗದಲ್ಲಿ ಎಚ್ಚರದಿಂದಿರುವಂತೆ ಗಡಿ ಭದ್ರತಾ ಪಡೆ ಹಾಗೂ ಸಶಸ್ತ್ರ ಸೀಮಾ ಬಲ್‌ಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ.

ಪೇಟ ಧರಿಸಿದ ಹಾಗೂ ಧರಿಸಿಲ್ಲದ ಅಮೃತ್‌ಪಾಲ್‌ ಸಿಂಗ್‌ನ ಎರಡು ಚಿತ್ರಗಳೊಂದಿಗೆ ಎಲ್ಲಾ ಬಿಎಸ್‌ಎಫ್‌ ಮತ್ತು ಎಸ್‌ಎಸ್‌ಬಿ ಘಟಕಗಳಿಗೆ ಸಂದೇಶ  ರವಾನಿಸಲಾಗಿದೆ.

ಆತನನ್ನು ಕಳೆದ ಶನಿವಾರವೇ ಜಲಂಧರ್-ಮೋಗಾ ರಸ್ತೆಯ ಮೆಹತ್‌ಪುರ್‌ ಎಂಬಲ್ಲಿ ಬಂಧಿಸುವ ಉದ್ದೇಶ ಪೊಲೀಸರಿಗಿತ್ತು., ಆದರೆ ಆತ ತನ್ನ ವಾಹನ ಹಾಗೂ ಮೊಬೈಲ್‌ ಫೋನ್‌ ಅನ್ನು ನಕೋಡರ್‌ ಎಂಬಲ್ಲಿಯೇ ಬಿಟ್ಟು ತೆರಳುವ ಮೂಲಕ ಪೊಲೀಸರ ಕಣ್ಣಿಗೆ ಮಣ್ಣೆರಚಿಸಿದ್ದ. ಆದರೆ ಶನಿವಾರ ರಾಜ್ಯಾದ್ಯಂತ ನಡೆದ ಕಾರ್ಯಾಚರಣೆಯಲ್ಲಿ ಆತನ 78 ಸಹವರ್ತಿಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಪಂಜಾಬ್‌ನಲ್ಲಿ ಸೋಮವಾರ ಅಪರಾಹ್ನದವರೆಗೆ ಅಂತರ್ಜಾಲ ಸ್ಥಗಿತಗೊಳಿಸಲಾಗಿದೆ.  ಆರು 12-ಬೋರ್‌ ರೈಫಲ್‌ಗಳು 196 ಕಾರ್ಟ್ರಿಜ್‌ಗಳನ್ನು ಅಮೃತ್‌ಪಾಲ್‌ ಸಹವರ್ತಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿರುವ ಪೊಲೀಸರು ಆತ ಹಾಗೂ ಆತನ ಏಳು ಸಹಚರರ ವಿರುದ್ಧ ಶಸ್ತಾಸ್ತ್ರ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.  ಬಂಧಿತ ಏಳು ಮಂದಿಯನ್ನು ಮಾರ್ಚ್‌ 23 ರ ತನಕ ಪೊಲೀಸ್‌ ಕಸ್ಟಡಿಗೆ ವಹಿಸಲಾಗಿದೆ.

ಗುಪ್ತಚರ ಏಜನ್ಸಿಗಳ ಪ್ರಕಾರ ಕುಟುಂಬದ ಸಾರಿಗೆ ಉದ್ಯಮದಲ್ಲಿ ಟ್ರಕ್‌ ಚಾಲಕನಾಗಿ ಕೆಲಸ ಮಾಡಲು ಅಮೃತ್‌ಪಾಲ್‌ 2012 ರಲ್ಲಿ ದುಬೈಗೆ ಹೋಗಿದ್ದ. ಅಲ್ಲಿ ಆತ ಖಲಿಸ್ತಾನಿ ಲಖಬೀರ್‌ ಸಿಂಗ್‌ ರೋಡೆ ಸಹೋದರ ಜಸ್ವಂತ್‌ ಸಿಂಗ್‌ ರೋಡೆ ಜೊತೆ ನಂಟು ಬೆಳೆಸಿದ್ದ. ಜೊತೆಗೆ ತೀವ್ರಗಾಮಿ ಪರಮ್‌ಜಿತ್‌ ಸಿಂಗ್‌ ಪಮ್ಮ ಜೊತೆಗೂ ಸಂಪರ್ಕದಲ್ಲಿದ್ದ. ಇಬ್ಬರೂ ಅಮೃತ್‌ಪಾಲ್‌ನನ್ನು ಪಾಕಿಸ್ತಾನಿ ಐಎಸ್‌ಐಗೆ ಪರಿಚಯಿಸಿದ ನಂತರ ಪಂಜಾಬ್‌ನಲ್ಲಿ ಖಲಿಸ್ತಾನಿ ಪರ ಭಾವನೆ ಮೂಡಿಸಲು ಆತನಿಗೆ ಹಣದ ಆಮಿಷವೊಡ್ಡಲಾಗಿತ್ತು ಎಂದು ಗುಪ್ತಚರ ಮೂಲಗಳು ತಿಳಿಸಿವೆ.

Similar News